ಬೆವರು ಸುರಿಸುವವರು ದೇಶದ ವಾರಸುದಾರರಾಗಬೇಕು: ಸಾಹಿತಿ ಮಂಜುನಾಥ ಸ್ವಾಮಿ

Update: 2018-05-30 17:36 GMT

ಚಿಕ್ಕಮಗಳೂರು, ಮೇ 30: ಡಾ.ಬಿ.ಆರ್.ಅಂಬೇಡ್ಕರ್ ವಾರಸುದಾರರು ಎಂದು ಹೇಳಿಕೊಳ್ಳುವವರ ನಡಿಗೆ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಪ್ರಸಕ್ತ ಎದುರಿಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ದಿಣ್ಣೇಕೆರೆ ಮಂಜುನಾಥ ಸ್ವಾಮಿ ಅಭಿಪ್ರಾಯಿಸಿದರು.

ತಾಲೂಕಿನ ಕೂದುವಳ್ಳಿಯಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂ.ಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಈ ಭೂಮಿಯ ಮೇಲೆ 65 ವರ್ಷಗಳ ಕಾಲ ಬದುಕಿದ್ದ ಡಾ.ಅಂಬೇಡ್ಕರ್ ಅವರು ತಮ್ಮ ವಿಚಾರಧಾರೆ ಮೂಲಕ ದೇಶಾದ್ಯಂತ ತನ್ನ ವಾರಸುದಾರರನ್ನು ಹುಟ್ಟುಹಾಕಿದ್ದಾರೆ. ಯಾರು ಈ ಭೂಮಿಯಲ್ಲಿ ಬೆವರು ಸುರಿಸಿ ದುಡಿದು ತಿನ್ನುತ್ತಾರೋ ಅವರು ಈ ದೇಶದ ವಾರಸುದಾರರಾಗಬೇಕು ಎಂದು ಅವರು ಹೇಳಿದ್ದರು. ಆದರೆ, ಅವರ ವಾರಸುದಾರರಾದವರು ತಮ್ಮ ನಡಿಗೆ ಬಗ್ಗೆ ಒಮ್ಮೆಯಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಪ್ರಸಕ್ತ ಸಮಾಜದಲ್ಲಿ ಸದ್ಯ ಎರಡು ವರ್ಗವಿದೆ. ಒಂದು ಬೆವರು ಇಳಿಸಿ ದುಡಿದು ತಿನ್ನುವ ವರ್ಗ. ಇನ್ನೊಂದು ಇನ್ನೊಬ್ಬರ ಬೆವರಿನ ಆ್ರಯದಲ್ಲಿ ಬದುಕುವ ವರ್ಗ. ಮೊದಲ ವರ್ಗ ಭೂಮಿಯಲ್ಲಿ ಕಷ್ಟಪಟ್ಟು ದುಡಿದು ಬೆವರಿಳಿಸಿದರೆ, ಇನ್ನೊಂದು ವರ್ಗ ಭೂಮಿಯನ್ನು ಭಾವನಾತ್ಮಕವಾಗಿ ಕರ್ಮಭೂಮಿ, ಮಾತೃಭೂಮಿ, ವೀರಭೂಮಿ ಎಂಬಿತ್ಯಾದಿ ಹೆಸರಿನಲ್ಲಿ ಪೂಜಿಸಿ ಕೂತು ಉಣ್ಣುವ ವರ್ಗವಾಗಿದೆ. ಸಾಕಷ್ಟು ಮಂತ್ರಗಳು ಭೂಮಿ ಪೂಜೆ ಮಾಡುವ ಸಂಬಂಧ ಇವೆಯೇ ಹೊರತು ಭೂಮಿಯನ್ನು ಬಿತ್ತುವ ಬಗ್ಗೆ ಇಲ್ಲ ಎಂಬುದನ್ನು ಮನಗಾಣಬೇಕು ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಡಿಎಸ್‍ಎಸ್ ಹುಟ್ಟಿದ್ದೇ ಜಿಲ್ಲೆಯ ಸಣ್ಣ ಗ್ರಾಮ ಕೂದುವಳ್ಳಿಯಲ್ಲಿ. ಇಬ್ಬರು ಜಿಲ್ಲಾ ನಾಯಕರು, ಒಂದು ಪಕ್ಷದ ಜಿಲ್ಲಾಧ್ಯಕ್ಷನನ್ನು ಜಿಲ್ಲೆಗೆ ಕೊಟ್ಟಿರುವ ಹೆಮ್ಮೆ ಈ ಊರಿನದು. ಪುರೋಹಿತಶಾಹಿ ಪ್ರಚೋದಿತ ಹಬ್ಬಗಳನ್ನು ಮಾಡಬಾರದು. ಹೋಲಿ ಹಬ್ಬ ಶೂದ್ರ ಹಿರಣ್ಯಕಶ್ಯಪುವಿನ ಸಹೋದರಿ ಹೋಲಿಕಳನ್ನು ಇದೇ ಪುರೋಹಿತಶಾಹಿ ವರ್ಗ ಅತ್ಯಾಚಾರ ಮಾಡಿ ಕೊಂದ ದಿನವಾಗಿದೆ. ಈ ಹಬ್ಬವನ್ನು ಶೂದ್ರವರ್ಗದ ಯಾರೂ ಆಚರಿಸಬಾರದು ಎಂದು ಕರೆ ನೀಡಿದರು.

ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಲೋಕೇಶ್‍ಮೌರ್ಯ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಪಿ.ರಾಜರತ್ನಂ, ಜಿಲ್ಲಾ ಪಂಚಾಯತ್ ಸದಸ್ಯ ಹಿರಿಗಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಕಾಂಗ್ರೆಸ್ ಮುಖಂಡರಾದ ಚೇತನ, ಸುಬ್ಬೇಗೌಡ, ಸದಸ್ಯರಾದ ಲಕ್ಷ್ಮಣಗೌಡ, ಕೃಷ್ಣಪ್ರಸಾದ್, ಸೊಸೈಟಿ ಸದಸ್ಯ ರವೀಂದ್ರ, ಕೆ.ಎಂ.ಮಂಜುನಾಥ್, ಕವೀಶ್, ಪುಷ್ಪಲತಾ, ರುದ್ರಾಣಿ ಹಾಗೂ ಸಂಘದ ಪದಾಕಾರಿಗಳು ಹಾಜರಿದ್ದರು. ಇದೇ ವೇಳೆ ವಿವಿ ಕ್ರೀಡಾ ವಿಜೇತರಿಗೆ ಬಹುಮಾನ ನೀಡಲಾಯಿತು. ಸರಕಾರಿ ನೌಕರಿಯಲ್ಲಿರುವ ಊರಿನವರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿದರು. ಅಶೋಕ್ ನಿರೂಪಿಸಿ ಚೆಲುವರಾಜ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News