ಗೊಂದಲವಿಲ್ಲದೆ 5 ವರ್ಷ ಆಡಳಿತ ನಡೆಸುತ್ತೇವೆ: ಡಿಸಿಎಂ ಡಾ.ಜಿ ಪರಮೇಶ್ವರ್

Update: 2018-05-30 17:45 GMT

ಕೊರಟಗೆರೆ,ಮೇ.30: ರಾಜ್ಯದ ಜನ ನಮ್ಮ ಸರಕಾರದ ಬಗ್ಗೆ ಅನುಮಾನ ಪಡುವುದು ಬೇಡ. ನಾವು 5 ವರ್ಷ ಅಧಿಕಾರ ಪೂರೈಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಚುನಾವಣೆ ನಂತರ ಇದೇ ಮೊದಲ ಬಾರಿಗೆ ಕೊರಟಗೆರೆ ಪಟ್ಟಣಕ್ಕೆ ಭೇಟಿ ನೀಡಿ ಮತದಾರರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವಿತ್ತು. ಆದರೆ ಜನರ ತೀರ್ಪು ಬೇರೆಯಾಗಿ ಯಾರಿಗೂ ಸ್ಪಷ್ಟ ಬಹುತ ಬಾರದ ಹಿನ್ನೆಲೆಯಲ್ಲಿ ರಾಜ್ಯದ ಹಿತಕ್ಕಾಗಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಯಾವುದೇ ಗೊಂದಲವಿಲ್ಲದೇ ಎಲ್ಲಾ ಸಮುದಾಯದ ಜನರಿಗೆ ನ್ಯಾಯ ದೊರಕಿಸಿಕೊಡಲು ಸರಕಾರ ಬದ್ಧವಾಗಿದೆ ಎಂದರು.

ಕ್ಷೇತ್ರದ ಜನರು ನನ್ನಿಂದ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದೇ ರೀತಿ ಚುನಾವಣೆ ವೇಳೆ ಪ್ರತೀ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಲ್ಲಾ ಸಮಸ್ಯೆಯನ್ನು ಅರಿತಿದ್ದು, ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಬೇಕಿದ್ದು, ಇವೆಲ್ಲಾ ಸೇರಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಮ್ಮ ಮತ್ತು ಜೆಡಿಎಸ್ ನಡುವೆ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್-22 ಮತ್ತು ಜೆಡಿಎಸ್ 11 ಮಂತ್ರಿಗಳು ಸೇರಿ ಒಟ್ಟು 34 ಮಂದಿಯ ಮಂತ್ರಿಮಂಡಲ ನಿಶ್ಚಯಿಸಿದ್ದು, ನಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ವಿಳಂಬವಾಗುತ್ತಿದೆ. ಎತ್ತಿನ ಹೊಳೆ ಯೋಜನೆ ಅನುಷ್ಠಾನದಲ್ಲಿ ಜಮೀನು ಕಳೆದುಕೊಳ್ಳುವಂತಹ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೊರಟಗೆರೆ ರೈತರಿಗೂ ಏಕರೂಪ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದ್ದು, ಎಲ್ಲರಿಗೂ ಒಂದೇ ರೀತಿಯ ಪರಿಹಾರ ನೀಡಲಾಗುವುದು ಎಂದರು.

ನಮ್ಮ ಮೈತ್ರಿ ಸರಕಾರದ ಮೇಲೆ ಹಲವು ನಿರೀಕ್ಷೆಗಳಿವೆ. ಅದೇ ರೀತಿ ಅನುಮಾನಗಳೂ ಇವೆ. ಇವೆರಡನ್ನೂ ಮೆಟ್ಟಿ ನಿಂತು ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ನಮ್ಮ ಮೈತ್ರಿ ಸರಕಾರ ಬದ್ಧವಾಗಿದ್ದು, ಪಕ್ಷ ಭೇದವಿಲ್ಲದೇ ಅಭಿವೃದ್ಧಿಯೊಂದೇ ನಮ್ಮ ಅಜೆಂಡಾ. ಈ ಬಾರಿ ನನ್ನ ಚುನಾವಣೆಯಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಯುವಕರು ಸ್ವಯಂ ಪ್ರೇರಿತರಾಗಿ ಮತಯಾನೆ ಮಾಡಿ ನನ್ನ ಗೆಲುವಿಗೆ ಕಾರಣಾಗಿದ್ದು, ಇವರೆಲ್ಲರಿಗೂ ಅಭಿನಂಧಿಸುತ್ತೇನೆ. ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದಂತಹ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಗೊಂದಲವಿಲ್ಲದೇ ಚುನಾವಣೆ ನಡೆಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News