×
Ad

ಮೈಸೂರು: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Update: 2018-05-30 23:44 IST

ಮೈಸೂರು,ಮೇ.30: ಪೆಟ್ರೋಲ್, ಡೀಸೆಲ್ ಬೆಲೆಯನ್ನು ದಿನೇ ದಿನೇ ಏರಿಕೆ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತಿ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆಯ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಅವರು, ಕೇಂದ್ರ ಸರ್ಕಾರ ನಿತ್ಯವೂ ಪೆಟ್ರೋಲ್, ಡೀಸೆಲ್ ಅನಿಲ ಬೆಲೆಗಳನ್ನು ಏರಿಸುತ್ತಲೇ ಇದೆ. ಇದರಿಂದ ದೇಶದ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಿತ್ಯವೂ ಪರಿಷ್ಕರಿಸಿ ಜನರ ಕಣ್ಣಿಗೆ ಕಾಣದಂತೆ ದಿನಕ್ಕೆ 10-15ಪೈಸೆಯಂತೆ ಏರಿಕೆ ಮಾಡಿ ದೇಶದ ಜನರ ಹಣವನ್ನು ಲೂಟಿ ಮಾಡುತ್ತಿದೆ, ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. 

ಅಧಿಕಾರಕ್ಕೆ ಬರುವ ಮುಂಚೆ ಕೇಂದ್ರ ಬಿಜೆಪಿ ಪ್ರಣಾಳಿಕೆಯಲ್ಲಿ 40ರೂ.ಗೆ ಲೀಟರ್ ಪೆಟ್ರೋಲ್ ನೀಡುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿಯವರ ಮೇಲೆ ಜನರು ಇರಿಸಿದ್ದ ಅಪಾರ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ. ಅಚ್ಛೇ ದಿನಗಳು ಬರುತ್ತವೆ ಎಂದು ಹೇಳಿ ದೇಶದ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಬಿಜೆಪಿ ನಾಯಕರಿಗೆ ಅಚ್ಛೇ ದಿನಗಳು ಬಂದಿವೆ. ದೇಶದ ಜನರಿಗೆ ಬಂದಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಕೂಡ ಜಿಎಸ್ ಟಿ ಗೆ ಸೇರಿಸಿ ಎಂದು ಒತ್ತಾಯಿಸಿದರು. 80ರೂ ಇರುವ ಬೆಲೆಯನ್ನು 40ರೂ.ಗಳಿಗೆ ಇಳಿಸಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನ ನಿಮ್ಮ ವಿರುದ್ಧ ದಂಗೆ ಏಳುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರಾಧ್ಯಕ್ಷ ಪ್ರಜೀಶ್ ಪಿ, ಶಾಂತಮೂರ್ತಿ ಆರ್, ಸಿ.ಎಸ್.ನಂಜುಂಡಸ್ವಾಮಿ, ಶಾಂತರಾಜೇ ಅರಸ್, ಜಗದೀಶ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News