ಸೊರಬ: ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು
ಸೊರಬ,ಮೇ.30: ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ ಬಾಲಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
ಮೃತ ಬಾಲಕ ಚಿದಾನಂದ (13) ತನ್ನ ತಾಯಿ ಹಾಗೂ ತಮ್ಮನ ಜೊತೆ ಸರ್ವೆ ನಂ. 58ರಲ್ಲಿ ಬೆಳೆಯಲಾಗಿದ್ದ ಶುಂಠಿ ಮಡಿ ನಡುವೆ ಹಾಕಲಾಗಿದ್ದ ಮೆಣಸಿನ ಗಿಡಗಳಿಗೆ ಗೊಬ್ಬರ ಹಾಕಿ ಸಂಜೆ ಮನೆಗೆ ವಾಪಸು ಬರುತ್ತಿದ್ದ ವೇಳೆ ಜಮೀನಿನಲ್ಲಿ ಹರಿದು ಬಿದ್ದಿದ್ದ ತಂತಿಯನ್ನು ತುಳಿದು ಬಾಲಕ ಮೃತಪಟ್ಟಿದ್ದು, ಅದೃಷ್ಟವಷಾತ್ ತಾಯಿ ಹಾಗೂ ತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಮೂಲದ ಮೆಸ್ಕಾಂ ಗುತ್ತಿಗೆದಾರ ಚನ್ನಾಪುತ ಗ್ರಾಮದ ಮಂಜಪ್ಪಗೌಡ ಅವರ ಜಮೀನಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಅಳವಡಿಸಿದ್ದು, ತಂತಿಯನ್ನು ಇನ್ಸುಲೇಟರ್ ಗೆ ಸರಿಯಾಗಿ ಅಳವಡಿಸದೆ ಇರುವುದರಿಂದ ತಂತಿ ಹರಿದು ಬಿದ್ದಿದೆ. ನನ್ನ ಮಗನ ಸಾವಿಗೆ ಗುತ್ತಿಗೆದಾರನ ಬೇಜವಾಬ್ದಾರಿ ಹಾಗು ವಿದ್ಯುತ್ ತಂತಿ ಹರಿದು ಬಿದ್ದರೂ ಸಹ ವಿದ್ಯುತ್ ಸಂಪರ್ಕವನ್ನು ನಿಲ್ಲಿಸದೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪಟ್ಟಣದ ಪೊಲಿಸ್ ಠಾಣೆಗೆ ಬಸವರಾಜ್ ಬಿನ್ ಚಿರಂಜೀವಿ ಶೆಟ್ಟಿ ದೂರು ಸಲ್ಲಿಸಿದ್ದಾರೆ.
ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.