ಮಕ್ಕಳಿಂದಲೇ ಪರಿಸರದ ಜ್ಞಾನ ಬೆಳೆಸಿ: ಸಾಲು ಮರದ ತಿಮ್ಮಕ್ಕ

Update: 2018-05-31 12:12 GMT

ಹಾಸನ,ಮೇ.31: ಗಿಡ-ಮರ ಇದ್ದರೆ ಉತ್ತಮ ಪರಿಸರ ಸಿಗುತ್ತದೆ ಎಂಬುದರ ಬಗ್ಗೆ ಮಕ್ಕಳಿಂದಲೇ ಪರಿಸರ ಜ್ಞಾನ ಬೆಳೆಸುವಂತಾಗಬೇಕು ಎಂದು ಸಾಲು ಮರದ ತಿಮ್ಮಕ್ಕ ಕರೆ ನೀಡಿದರು.

ನಗರದ ಕೆ.ಆರ್. ಪುರಂನಲ್ಲಿರುವ ಮಣಿ ಆಸ್ಪತ್ರೆ ಸಂಸ್ಥೆಯ 12ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ, ಗರ್ಭೀಣಿಯರ ತೀವ್ರ ನಿಗಾಘಟಕ ಉದ್ಘಾಟನೆ ಹಾಗೂ ಆರೋಗ್ಯೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮದುವೆ ಆಗಿ ನನಗೆ 25 ವರ್ಷವಾದರೂ ಮಕ್ಕಳ ಭಾಗ್ಯ ಸಿಗಲಿಲ್ಲ. ಯೋಚನೆ ಮಾಡಿ ಗಿಡವನ್ನಾದರೂ ನೆಟ್ಟು ಅದನ್ನು ಪೋಷಿಸಿ ಬೆಳೆಸಬೇಕೆಂಬ ನಿರ್ಧಾರ ಮಾಡಿದೆ. ಅದರಂತೆ ಅನೇಕ ಗಿಡ ಹಾಕಿ ಬೆಳೆಸಿದ್ದೇನೆ. ಗಿಡ-ಮರಗಳು ಹೆಚ್ಚು ಇದ್ದರೆ ಉತ್ತಮ ಗಾಳಿ ಬರುತ್ತದೆ. ಕಾಲಕಾಲಕ್ಕೆ ಮಳೆ ಬರಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಇಂದು ರೈತ ಮಳೆ ಇಲ್ಲದೆ ಬೆಳೆ ನಷ್ಟವಾಗಿ ಕಷ್ಟ ಅನುಭವಿಸುತ್ತಿದ್ದಾನೆ. ಫೋಷಕರು ಮತ್ತು ಶಿಕ್ಷಕರು ಪರಿಸರ ಕಾಳಜಿ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ತಿಳುವಳಿಕೆ ಕೊಡಬೇಕಾದ ಅವಶ್ಯಕತೆ ಇದೆ. ಇದಕ್ಕೆ ಮೂಲ ಕಾರಣ ಮರಗಳು ಕಣ್ಮರೆಯಾಗುತ್ತಿರುವುದು ಎಂದು ಆತಂಕ ವ್ಯಕ್ತಪಡಿಸಿದರು. ಉತ್ತಮ ಮಳೆ ಬಂದು ದೇಶವೇ ಆನಂದವಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಹೋಗುತ್ತೇವೆ. ಆಸ್ಪತ್ರೆಗಳು ಖಾಯಿಲೆಗೆ ಚಿಕಿತ್ಸೆ ಕೊಡುತ್ತದೆ ಹೊರತು ಆರೋಗ್ಯ ಕೊಡಲು ಆಗುವುದಿಲ್ಲ. ಅದಕ್ಕೆ ಪೂರಕವಾದ ಉತ್ತಮ ಪರಿಸರ ಇರಬೇಕು ಎಂದರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸಾಂಕ್ರಮಿಕ ರೋಗ ತಡೆಗಟ್ಟುವಲ್ಲಿ ಎಲ್ಲೋ ಒಂದು ಕಡೆ ವಿಫಲರಾಗಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ನಿಜವಾದ ಆರೋಗ್ಯ ಸಿಗಬೇಕಾದರೆ ನಮ್ಮ ಸುತ್ತ ಮುತ್ತಲ ಪರಿಸವನ್ನು ಕಾಪಾಡಿಕೊಳ್ಳಬೇಕು. ಅಗತ್ಯವಿರುವಷ್ಟು ಗಿಡನೆಟ್ಟು ಬೆಳೆಸಬೇಕು. ಕುಡಿಯಲು ಉತ್ತಮ ನೀರು, ಒಳ್ಳೆಯ ಗಾಳಿ, ಸಮತೋಲನ ಪರಿಸರ ಬೇಕು. ವಾಯುಮಾಲಿನ್ಯದಿಂದ ಇಂದು ವಿಷ ಅನೀಲ ಸೇವನೆ ಮಾಡಲಾಗುತ್ತಿದೆ. ಶುದ್ಧ ನೀರು ಸಿಗದಿದ್ದರೂ ಕುದಿಸಿದ ನೀರನ್ನು ಉಪಯೋಗಿಸುವುದು ಒಳ್ಳೆಯದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಉತ್ತಮ ಪರಿಸರಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಣಿ ಆಸ್ಪತ್ರೆಯ ಸೌಮ್ಯಮಣಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದೆ ವೇಳೆ ರೋಟರಿ ಕ್ಲಬ್‍ನ ಶಿವಕುಮಾರ್, ಡಿ. ಮೋಹನ್, ರಮಾನಂದ್, ಮಣಿ ಆಸ್ಪತ್ರೆಯ ಯತೀಶ್ ಕುಮಾರ್, ಪರಿಸರ ಸೇವಕ ಬಳ್ಳೂರು ಉಮೇಶ್, ವೈದ್ಯರು ರಾಜಲಕ್ಷ್ಮಿ, ದಿನೇಶ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News