ತುಮಕೂರು: 'ಎಸ್.ಸಿ, ಎಸ್ಟಿ ಬಡ್ತಿ ಮೀಸಲಾತಿ ಮಸೂದೆ-2017' ಕ್ಕೆ ಸಹಿಗೆ ರಾಷ್ಟ್ರಪತಿಗಳಿಗೆ ಒತ್ತಾಯ
ತುಮಕೂರು,ಮೇ.31: ಕರ್ನಾಟಕ ಸರಕಾರ ಎರಡು ಸದನಗಳ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಎಸ್.ಸಿ,ಎಸ್ಟಿ, ಮುಂಬಡ್ತಿ ಮಸೂದೆ-2017ಕ್ಕೆ ರಾಷ್ಟ್ರಪತಿಗಳು ಕೂಡಲೇ ಅಂಕಿತ ಹಾಕಿ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯಬೇಕು, ಅಟ್ರಾಸಿಟಿ ಕೇಸು ದುರ್ಬಲಗೊಳ್ಳದಂತೆ ಕಾಪಾಡುವುದು, ಬ್ಯಾಕಲಾಗ್ ಹುದ್ದೆಗಳ ಭರ್ತಿ, ಖಾಸಗಿ ವಲಯದಲ್ಲಿ ಮೀಸಲಾತಿಗೆ ಒತ್ತಾಯಿಸಿ ಇಂದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ನಿವೃತ್ತ ನೌಕರರ ಸಂಘ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಕಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮೀಳ ಕೇಸಿನ ತೀರ್ಪುನ್ನು ಜಾರಿ ಮಾಡುವ ತರಾತುರಿಯಲ್ಲಿ ಸರಕಾರಗಳು ಸಂವಿಧಾನದ 85ನೇ ತಿದ್ದುಪಡಿಯಲ್ಲಿನ ಮಹತ್ವದ ಅಂಶವನ್ನು ಗಾಳಿಗೆ ತೂರಿ, ನಿಯಮಾವಳಿಗಳನ್ನು ರೂಪಿಸಿರುವ ಹಿನ್ನೆಲೆಯಲ್ಲಿ ಅನೇಕ ನೌಕರರಿಗೆ ತೊಂದರೆಯಾಗಿದೆ. ಕೆಲ ನೌಕರರು ಈ ಅಘಾತದಿಂದ ಹೊರಬರಲಾರದೆ ಜೀವ ಕಳೆದು ಕೊಂಡಿದ್ದಾರೆ. ದಕ್ಷತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಾಷ್ಟ್ರಪತಿಗಳು ರಾಜ್ಯ ಸರಕಾರ ಎರಡು ಸದನದಲ್ಲಿ ಬಹುಮತದ ಮೂಲಕ ಅಂಗೀಕರಿಸಿ ಕಳುಹಿಸಿರುವ ಬಡ್ತಿ ಮೀಸಲಾತಿ ಮಸೂದೆ-2017ಕ್ಕೆ ಸಹಿ ಮಾಡುವ ಮೂಲಕ ಎಸ್.ಸಿ, ಎಸ್ಟಿ ನೌಕರರ ಹಿತ ಕಾಯಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂವಿಧಾನದ 85ನೇ ತಿದ್ದುಪಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಹಂತದ ಹುದ್ದೆಗಳಲ್ಲಿಯೂ ಶೇ15+3ರ ಮೀಸಲಾತಿ ಕಾಯ್ದುಕೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವಾಲಯದ ಉನ್ನತ ಹುದ್ದೆಗಳಲ್ಲಿ ಶೇ80 ರಷ್ಟು ಬ್ರಾಹ್ಮಣ ಸಮುದಾಯದ ನೌಕರರಿದ್ದು, ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ನೌಕರರ ಸಂಖ್ಯೆ ತೀರ ಕಡಿಮೆ. ಇಂದಿನ ದುಸ್ಥಿತಿಗೆ ಇದೇ ಕಾರಣವಾಗಿದೆ. ಪವಿತ್ರ ಕೇಸಿನ ತೀರ್ಪು ಜಾರಿಯಲ್ಲಿ 85ನೇ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ರಾಷ್ಟ್ರಪತಿಗಳು ಗಮನಹರಿಸಬೇಕೆಂದು ಆಗ್ರಹಿಸಲಾಗಿದೆ.
ಕೇಂದ್ರ ಸರಕಾರದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಬ್ಯಾಕಲಾಗ್ ಹುದ್ದೆಗಳು ಕಣ್ಮರೆಯಾಗಿವೆ. ರಾಜ್ಯದಲ್ಲಿಯೂ ಸುಮಾರು 52-30 ಸಾವಿರ ಬ್ಯಾಕ್‍ಲಾಗ್ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿದರೆ ಈ ಸಮುದಾಯ ನಿರುದ್ಯೋಗ ಸಮಸ್ಯೆಯಿಂದ ಹೊರಬರಲಿದೆ. ಈ ಬಗ್ಗೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಸದರು, ಶಾಸಕರು ಸದನದಲ್ಲಿ ದ್ವನಿ ಮಾಡಿ, ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಪಿ.ಎನ್.ರಾಮಯ್ಯ, ರೈತ ಮುಖಂಡರಾದ ಎನ್.ಜಿ.ರಾಮಚಂದ್ರ,ಕೊಟ್ಟ ಶಂಕರ್ ಪ್ರತಿಭಟನಾನಿರತರನ್ನು ಕುರಿತು ಮಾತನಾಡಿದರು. ಪ್ರತಿಭಟನೆಯಲ್ಲಿ ನರಸಿಂಹಯ್ಯ, ಕೇಬಲ್ ರಘು, ಕಲ್ಲುಕೋಟೆ ನರಸಿಂಹಮೂರ್ತಿ, ರಾಮಾಂಜೀನಪ್ಪ, ರಂಜನ್, ರಂಗಧಾಮಯ್ಯ, ನಾರಾಯಣಪ್ಪ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.