ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪ ಚುನಾವಣೆ: ಬಿಜೆಪಿ ಎದುರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಖಾಡಕ್ಕೆ?

Update: 2018-05-31 15:06 GMT

ಶಿವಮೊಗ್ಗ, ಮೇ 31: ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕೆಲ ತಿಂಗಳಲ್ಲಿಯೇ ಉಪ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳು ಯಾರೆಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯಲಾರಂಭಿಸಿದೆ.

ಸದ್ಯದ ರಾಜಕೀಯ ಸ್ಥಿತಿ ಗಮನಿಸಿದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಅಖಾಡಕ್ಕಿಳಿದಿದ್ದವರು ಈ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವ ಸಾಧ್ಯತೆಗಳು ವಿರಳವಾಗಿದೆ. ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿದ್ದ ಬಿ.ಎಸ್.ಯಡಿಯೂರಪ್ಪ, ಇದೀಗ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ. ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕಾರಣದಿಂದ ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ. ಉಳಿದಂತೆ ಎರಡನೇ ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರ ಸ್ಪರ್ಧೆ ಸಾಧ್ಯತೆ ಅನುಮಾನವಾಗಿದೆ.

ಕಳೆದ ಬಾರಿ ಟಿಕೆಟ್‍ಗೆ ಸಾಕಷ್ಟು ಕಸರತ್ತು ನಡೆಸಿದ್ದ ಅವರಿಗೆ, ಈ ಬಾರಿ ನಿರಾಯಾಸವಾಗಿ ಟಿಕೆಟ್ ಸಿಗಲಿದೆ. ಪಕ್ಷದ ವರಿಷ್ಠರು ಕೂಡ ಅವರನ್ನೇ ಅಭ್ಯರ್ಥಿಯಾಗಿಸುವ ಚಿಂತನೆ ನಡೆಸಿದ್ದಾರೆ. ಆದರೆ ಮಂಜುನಾಥ ಭಂಡಾರಿಯವರು ನಾನಾ ಕಾರಣಗಳಿಂದ ಚುನಾವಣಾ ಕಣದಿಂದ ದೂರ ಉಳಿಯುವ ಇಂಗಿತವನ್ನು ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಭಾರೀ ನಿರೀಕ್ಷೆ ಹುಟ್ಟಿಸಿ ಅಂತಿಮವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚಿತ್ರನಟ ಶಿವರಾಜ್‍ ಕುಮಾರ್ ಪತ್ನಿ, ದಿವಂಗತ ಎಸ್.ಬಂಗಾರಪ್ಪ ಪುತ್ರಿಯಾದ ಗೀತಾರವರು ಕೂಡ ಉಪ ಚುನಾವಣಾ ಕಣಕ್ಕಿಳಿಯುತ್ತಾರಾ? ಇಲ್ಲವೇ? ಎಂಬುವುದು ಸ್ಪಷ್ಟವಾಗುತ್ತಿಲ್ಲ. ಅವರ ಸ್ಪರ್ಧೆ ಸಾಧ್ಯತೆಯೂ ಅನುಮಾನವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಭ್ಯರ್ಥಿಗಳ್ಯಾರು?: ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಪುತ್ರ, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಲೋಕಸಭೆ ಚುನಾವಣಾ ಕಣಕ್ಕಿಳಿಯುವ ಕಾರಣದಿಂದಲೇ ಬಿ.ವೈ.ಆರ್. ರವರು ವಿಧಾನಸಭಾ ಚುನಾವಣಾ ಸ್ಪರ್ಧೆಯಿಂದ ದೂರ ಉಳಿದಿದ್ದರು. ಈಗಾಗಲೇ ಅವರು ಉಪ ಚುನಾವಣಾ ಪೂರ್ವಭಾವಿ ಸಿದ್ದತೆಗಳಲ್ಲಿ ತಲ್ಲೀನರಾಗಿರುವ ಮಾಹಿತಿಗಳು ಅವರ ಆಪ್ತ ಮೂಲಗಳಿಂದ ಕೇಳಿಬರುತ್ತಿದೆ.

ಕಾಂಗ್ರೆಸ್‍ನಿಂದ ಮಂಜುನಾಥ ಭಂಡಾರಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲವಾಗಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಪ್ರಸ್ತುತ ಮಾಜಿ ಶಾಸಕ ಈಡಿಗ ಸಮುದಾಯಕ್ಕೆ ಸೇರಿದ ಬೇಳೂರು ಗೋಪಾಲಕೃಷ್ಣ, ಹೈಕೋರ್ಟ್ ವಕೀಲ, ಬ್ರಾಹ್ಮಣ ವರ್ಗಕ್ಕೆ ಸೇರಿದ ಕೆ. ದಿವಾಕರ್, ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೋರೇಟರ್, ಲಿಂಗಾಯತ ವರ್ಗಕ್ಕೆ ಸೇರಿದ ಹೆಚ್.ಸಿ.ಯೋಗೇಶ್‍ರವರ ಹೆಸರು ಕೇಳಿಬರುತ್ತಿದೆ.

ಉಳಿದಂತೆ ಜೆಡಿಎಸ್‍ನಿಂದ ಗೀತಾ ಶಿವರಾಜ್‍ಕುಮಾರ್ ಕಣಕ್ಕಿಳಿಯುತ್ತಾರಾ? ಎಂಬ ಕುತೂಹಲ ಮನೆ ಮಾಡಿದೆ. ಬದಲಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಗೀತಾರವರು ಕಣಕ್ಕಿಳಿಯುವ ಸಾಧ್ಯತೆಗಳು ಕಡಿಮೆ ಎಂಬ ಮಾತುಗಳು ಜೆಡಿಎಸ್ ಮೂಲಗಳು ಹೇಳುತ್ತಿವೆ. ಅವರು ಕಣಕ್ಕಿಳಿಯದಿದ್ದರೆ ಆ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಮೈತ್ರಿ: 2019 ರ ಎಪ್ರಿಲ್ - ಮೇ ತಿಂಗಳಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಏಳೆಂಟು ತಿಂಗಳು ಅವಧಿಗಾಗಿ ಪ್ರಸ್ತುತ ಎದುರಾಗಿರುವ ಉಪ ಚುನಾವಣೆಯು ರಾಜಕೀಯ ಪಕ್ಷಗಳಿಗೆ ಹೊರೆಯಾಗಿ ಪರಿಣಮಿಸಿದೆ. ಒಲ್ಲದ ಮನಸ್ಸಿನಿಂದಲೇ ಚುನಾವಣೆ ಎದುರಿಸುವಂತಾಗಿದೆ. ಆದರೆ ಈ ಉಪ ಚುನಾವಣೆಯು ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. 'ಸೆಮಿ ಫೈನಲ್' ರೀತಿ ಪರಿಗಣಿತವಾಗಿದ್ದು, ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕಡೆ ಬಿಜೆಪಿ ಜಯ ಸಂಪಾದಿಸಿದೆ. ಆ ಪಕ್ಷದ ಪ್ರಾಬಲ್ಯ ಹೆಚ್ಚಿದೆ. ಈ ಕಾರಣದಿಂದ ಮೈತ್ರಿಯ ಮೂಲಕ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು, ಶಿವಮೊಗ್ಗ ಕ್ಷೇತ್ರದಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ಇದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಒಟ್ಟಾರೆ ಮಳೆಗಾಲದಲ್ಲಿ ಎದುರಾಗುತ್ತಿರುವ ಉಪ ಚುನಾವಣೆಯು ರಾಜಕೀಯ ಕ್ಷೇತ್ರವನ್ನು ಸಾಕಷ್ಟು ಕಾವೇರುವಂತೆ ಮಾಡುವುದಂತೂ ಸತ್ಯವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ : ಮಂಜುನಾಥ ಭಂಡಾರಿ ಅನುಮಾನ?

ಒಂದೆಡೆ ಕಾಂಗ್ರೆಸ್ ಪಕ್ಷದ ವರಿಷ್ಠರು, ಕಳೆದ ಬಾರಿ ಲೋಕಸಭೆ ಚುನಾವಣಾ ಕಣಕ್ಕಿಳಿದಿದ್ದ ಮಂಜುನಾಥ ಭಂಡಾರಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ. ಇನ್ನೊಂದೆಡೆ ಮಂಜುನಾಥ ಭಂಡಾರಿಯವರು ಚುನಾವಣಾ ಕಣಕ್ಕಿಳಿಯಲು ನಿರಾಸಕ್ತಿ ಹೊಂದಿದ್ದಾರೆ ಎಂಬ ಮಾತುಗಳು ಅವರ ಆಪ್ತ ಮೂಲಗಳು ಹೇಳುತ್ತಿವೆ.

'ಈಗಾಗಲೇ ಪಕ್ಷದ ವರಿಷ್ಠರು ಮಂಜುನಾಥ ಭಂಡಾರಿಯವರನ್ನು ಸಂಪರ್ಕಿಸಿ, ಉಪ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಆದರೆ ಅವರ ಪುತ್ರಿಯ ವಿವಾಹವು ಆಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಈ ಕಾರಣದಿಂದ ಅವರು ಚುನಾವಣೆಗೆ ಸ್ಪರ್ಧಿಸದಿರುವ ನಿರ್ಧಾರ ಮಾಡಿದ್ದಾರೆ. ವರಿಷ್ಠರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ವರಿಷ್ಠರು ಮಾತ್ರ, ಅಭ್ಯರ್ಥಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ. ಈ ಕಾರಣದಿಂದ ಅವರ ಅಂತಿಮ ನಿರ್ಧಾರ ಏನೆಂಬುವುದು ಸ್ಪಷ್ಟವಾಗಿ ಗೊತ್ತಿಲ್ಲ' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಭಂಡಾರಿ ಆಪ್ತರೋರ್ವರು ಮಾಹಿತಿ ನೀಡುತ್ತಾರೆ.

ಬಿಜೆಪಿ ಟಿಕೆಟ್ : ಎಸ್.ದತ್ತಾತ್ರಿ ಪರವಾಗಿ ಬ್ರಾಹ್ಮಣ ಮುಖಂಡರ ಲಾಬಿ!

ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಬ್ರಾಹ್ಮಣ ವರ್ಗಕ್ಕೆ ಸೇರಿದ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎಸ್.ದತ್ತಾತ್ರಿಯವರ ಹೆಸರು ದಿಢೀರ್ ಆಗಿ ಟಿಕೆಟ್ ರೇಸ್‍ನಲ್ಲಿ ಕೇಳಿ ಬರಲಾರಂಭಿಸಿದೆ. ಇತ್ತೀಚೆಗೆ ಪೂರ್ಣಗೊಂಡ ಎಂಎಲ್‍ಎ ಹಾಗೂ ಪ್ರಸ್ತುತ ನಡೆಯುತ್ತಿರುವ ನೈರುತ್ಯ ಪದವೀಧರ ಕ್ಷೇತ್ರದ ಎಂಎಲ್‍ಸಿ ಟಿಕೆಟ್‍ಗೆ ಬ್ರಾಹ್ಮಣ ಕೋಟಾದಡಿ ಎಸ್.ದತ್ತಾತ್ರಿ ಟಿಕೆಟ್ ಕ್ಲೈಮ್ ಮಾಡಿದ್ದರು.

'ಜಿಲ್ಲಾ ಬಿಜೆಪಿಯಲ್ಲಿ ಪ್ರಸ್ತುತ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಇಲ್ಲವಾಗಿದೆ. ಎಂಎಲ್‍ಎ, ಎಂಎಲ್‍ಸಿಗಳ್ಯಾರು ಇಲ್ಲ. ಈ ಕಾರಣದಿಂದ ಲೋಕಸಭೆ ಚುನಾವಣೆಯಲ್ಲಿ ಬ್ರಾಹ್ಮಣ ವರ್ಗಕ್ಕೆ ಸೇರಿದ ಎಸ್.ದತ್ತಾತ್ರಿಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು. ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಈ ಬಗ್ಗೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ, ಸಂಘಪರಿವಾರ ಹಿನ್ನೆಲೆಯ ಬಿಜೆಪಿ ಪಕ್ಷದ ಹಿರಿಯ ನಾಯಕರೋರ್ವರು ಹೇಳುತ್ತಾರೆ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News