ಚಿಕ್ಕಮಗಳೂರು: ನಗರಸಭೆ ಅಧಿಕಾರಿಗೆ ಆಯುಕ್ತೆಯಿಂದ ಅವಾಚ್ಯ ಶಬ್ಧಗಳಿಂದ ನಿಂದನೆ; ಆರೋಪ
ಚಿಕ್ಕಮಗಳೂರು, ಮೇ 31: ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ನಗರಸಭೆ ಆಯುಕ್ತೆ ಆರೋಗ್ಯ ನಿರೀಕ್ಷಕ ಹಾಗೂ ನಗರಸಭೆ ಎಇಇ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ, ಕಳೆದ ಎರಡು ತಿಂಗಳಿನಿಂದ ನೌಕರರ ವೇತನ ಪಾವತಿಸಿಲ್ಲ, ಮಹಿಳೆ ಎಂಬುದನ್ನು ಮರೆತು ಪ್ರತಿದಿನ ನೌಕರರಿಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸುತ್ತಾರೆಂದು ಆರೋಪಿಸಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ, ನೌಕರರು ಕಚೇರಿ ಕೆಲಸ ಬಹಿಷ್ಕರಿಸಿ ಆಯುಕ್ತರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಧರಣೆ ನಡೆಸಿದ ಘಟನೆ ಗುರುವಾರ ನಡೆಯಿತು.
ಆಯುಕ್ತೆ ತುಷಾರಮಣಿ ಅವರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಕೆ.ಎಸ್.ಈಶ್ವರ್ ಎಂಬವರನ್ನು ಬುಧವಾರ ಸಂಜೆ ಕಚೇರಿಯ ಕೊಠಡಿಗೆ ಕರೆಸಿಕೊಂಡು ತ್ಯಾಜ್ಯವಸ್ತು ನಿರ್ವಹಣಾ ಸ್ಥಳದ ಬಗ್ಗೆ ಎನ್‍ಓಸಿ ನಮೂನೆ ಸಲ್ಲಿಸದ ಕ್ಷುಲ್ಲಕ ವಿಷಯಕ್ಕೆ ನಗರಸಭೆ ಸದಸ್ಯರ ಮುಂದೆಯೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ತಿಳಿದು ಬಂದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗ್ಗೆ ಕಚೇರಿಯ ಎಲ್ಲ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ಕಚೇರಿ ಕೆಲಸವನ್ನು ಬಹಿಷ್ಕರಿಸಿದ್ದರು.
ನಂತರ ಆಯುಕ್ತರು ಪರಿಶಿಷ್ಟ ಜಾತಿಯ ನೌಕರರನ್ನೇ ಗುರಿಯಾಗಿಸಿಕೊಂಡು ಪ್ರತಿದಿನ ಕೆಟ್ಟ ಪದಗಳನ್ನು ಬಳಸಿ ಎಲ್ಲರೆದರು ನಿಂದಿಸುತ್ತಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಮಹಿಳೆ ಎಂಬುದನ್ನೂ ಮರೆತು ಪುರುಷ ಅಧಿಕಾರಿಗಳಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಈ ಹಿಂದೆಯೂ ಅನೇಕ ನೌಕರರು, ಸಿಬ್ಬಂದಿಗೆ ಇದೇ ರೀತಿಯಾಗಿ ನಿಂದಿಸಿದ್ದಾರೆ. ಮಹಿಳೆ ಎಂಬ ಕಾರಣಕ್ಕೆ ಸುಮ್ಮನಿದ್ದೆವು. ಆದರೆ ಇತ್ತೀಚೆಗೆ ಆಯುಕ್ತೆ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಎಲ್ಲ ನೌಕರರ ಮೇಲೂ ದೌರ್ಜನ್ಯ ನಡೆಸುತ್ತಿದ್ದಾರೆ. ನೌಕರರಿಗೆ ಎರಡು ತಿಂಗಳಿನಿಂದ ವೇತನ ನೀಡುತ್ತಿಲ್ಲ. ದಲಿತ ನೌಕರರನ್ನೇ ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ನೌಕರರರು ಅಧಿಕಾರಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಇದೇ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಈಶ್ವರ್ ನೂರಾರು ನೌಕರರೊಂದಿಗೆ ನಗರ ಠಾಣೆಗೆ ತೆರಳಿ ಆಯುಕ್ತೆ ತುಷಾರ ಮಣಿ ವಿರುದ್ಧ ದೂರು ನೀಡಿ, ಆಯುಕ್ತರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಂತರ ಈ ಸಂಬಂಧ ಜಿಲ್ಲಾಧಿಕಾರಿಗೂ ಅವರು ದೂರು ನೀಡಿದರು.
ಬಳಿಕ ನಗರಸಭೆಯ ಎಲ್ಲ ನೌಕರರು, ಸಿಬ್ಬಂದಿ ನಗರಸಭೆ ಆವರಣದ ಮುಂದೆ ಕುಳಿತು ಧರಣಿ ನಡೆಸಿದರು. ನಗರಸಭೆ ಆಯುಕ್ತೆಯನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು. ಕ್ಷೇತ್ರದ ಶಾಸಕರು ಹಾಗೂ ಡಿಸಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಆಯುಕ್ತೆ ವಿರುದ್ಧ ಘೋಷಣೆ ಕೂಗಿದರು. ಕೆಲ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ನೌಕರರ ಧರಣಿಗೆ ಸಾಥ್ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ನಗರಸಭೆ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ, ಉಪಾಧ್ಯಕ್ಷ ಸುದೀರ್, ಸದಸ್ಯರಾದ ಶ್ಯಾಮಲಾ ರಾವ್, ದೇವಿಪ್ರಸಾದ್ ಧರಣಿ ನಿರತರೊಂದಿಗೆ ಘಟನೆಯ ಮಾಹಿತಿ ಪಡೆದರು. ಈ ವೇಳೆ ಕೆಲ ಸದಸ್ಯರು ನೌಕರರ ಪರ ನಿಂತರೆ, ಬಿಜೆಪಿ ಸದಸ್ಯರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರು.
ಈ ವೇಳೆ ನಗರಸಭೆ ಸದಸ್ಯರ ನಡುವೆಯೇ ಮಾತಿನ ಚಕಮಕಿ ನಡೆಯಿತು. ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ತಮ್ಮಯ್ಯ, ಉಪಾಧ್ಯಕ್ಷ ಸುಧೀರ್, ಸದಸ್ಯೆ ಶ್ಯಾಮಲಾರಾವ್ ನೀತಿ ಸಂಹಿತೆ ಕಾರಣಕ್ಕೆ ಶಾಸಕರು ಸ್ಥಳಕ್ಕೆ ಬರಲು ಸಾಧ್ಯವಿಲ್ಲ, ಆಯುಕ್ತೆಯೊಂದಿಗೆ ಮಾತುಕತೆ ಮೂಲಕ ಸಂದಾನ ಮಾಡುವುದಾಗಿ ಪರಿಪರಿಯಾಗಿ ಧರಣಿ ನಿರತರನ್ನು ಗೋಗರೆದರೂ ನೌಕರರು ತಮ್ಮ ಪಟ್ಟು ಸಡಿಲಿಸಲಿಲ್ಲ. ಅತ್ತ ಆಯುಕ್ತೆ ತುಷಾರಾಣಿ ಅವರೂ ಧರಣಿ ನಿರತರೊಂದಿಗೆ ಮಾತನಾಡಲು ಸ್ಥಳಕ್ಕೆ ಬಾರದ ಪರಿಣಾಮ ಸಮಸ್ಯೆ ಮುಗಿಯುವ ಲಕ್ಷಣವೂ ಕಂಡು ಬರಲಿಲ್ಲ. ನೌಕರರು ಮಾತ್ರ ಆಯುಕ್ತೆಯನ್ನು ವರ್ಗಾವಣೆ ಮಾಡದ ಹೊರತು ಧರಣಿ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದಾಗ ನಗರಸಭೆಯ ಎಲ್ಲ ಸದಸ್ಯರೂ ಬೇರೆ ದಾರಿ ಕಾಣದೆ ಸುಮ್ಮನಾದ ದೃಶ್ಯಗಳು ಸ್ಥಳದಲ್ಲಿ ಕಂಡು ಬಂದವು. ಕೆಲ ಸದಸ್ಯರು ಶಾಸಕರ ಸಿಟಿ ರವಿಗೆ ಕರೆ ಮಾಡಲು ಮುಂದಾದರು.
ಅಂತಿಮವಾಗಿ ನಗರಸಭೆ ಸಿಬ್ಬಂದಿ ಧರಣಿ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಟಿ.ರವಿ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದರು. ಆಯುಕ್ತರು ಕಿರುಕುಳ ನೀಡುತ್ತಿದ್ದರೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೇ ಹೊರತು ಧರಣಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ನಿಮಗೆ ವೇತನ ಕೊಡುತ್ತಿರುವುದು ಸಾರ್ವಜನಿಕರ ಸೇವೆ ಮಾಡಲೆಂದು, ಕರ್ತವ್ಯ ಬಹಿಷ್ಕರಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ನಾನು ಈಗ ಅಧಿಕಾರಿಗಳ ಸಭೆ ನಡೆಸಲು ಆಗುವುದಿಲ್ಲ. ಜೂ.13ಕ್ಕೆ ನೀತಿ ಸಂಹಿತೆ ಮುಕ್ತಾಯಗೊಳ್ಳುತ್ತದೆ. ಆ ಬಳಿಕ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳೋಣ. ಜಿಲ್ಲಾಧಿಕಾರಿಗಳಿಗೆ ವಿಚಾರ ತಿಳಿಸಿದ್ದೇನೆ. ಕರೆಸಿ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ತಿಳಿಸಿದ್ದೇನೆ. ಅವರು ಕಡೂರಿನಲ್ಲಿದ್ದು ಅಲ್ಲಿಂದ ಬಂದ ನಂತರ ಮಾತನಾಡುತ್ತಾರೆ. ಧರಣಿ ಕೈ ಬಿಡಿ ಎಂದು ಮನವಿ ಮಾಡಿದರು.
ಶಾಸಕರ ಭರವಸೆ ಮೇರೆಗೆ ಧರಣಿಯನ್ನು ಕೈಬಿಟ್ಟರಾದರೂ ಆಯುಕ್ತೆ ತುಷಾರಮಣಿ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ನೊಂದ ನೌಕರರು ಶಾಸಕರಿಗೆ ತಿಳಿಸಿದರು.
ಬುಧವಾರ ಸಂಜೆ 4-30ರ ವೇಳೆ ಆಯುಕ್ತರು ತಮ್ಮನ್ನು ಕಚೇರಿಗೆ ಕರೆಸಿಕೊಂಡರು. ಆಗ ನಗರಸಭಾ ಸದಸ್ಯ ಹೆಚ್.ಡಿ.ತಮ್ಮಯ್ಯ, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಚಂದ್ರಮೌಳಿ ಅವರು ಆಯುಕ್ತರ ಕೊಠಡಿಯಲ್ಲಿ ಇದ್ದರು. ಕರ್ನಾಟಕ ಮಾಲಿನ್ಯ ಮಂಡಳಿ ವತಿಯಿಂದ ಘನತ್ಯಾಜ್ಯ ವಸ್ತು ನಿರ್ವಹಣಾ ಸ್ಥಳದ ಬಗ್ಗೆ ಎನ್.ಓ.ಸಿ. ಪಡೆಯುವ ಬಗ್ಗೆ ಮಾಹಿತಿ ಏಕೆ ಸಲ್ಲಿಸಿಲ್ಲವೆಂದು ಆಯುಕ್ತರು ಪ್ರಶ್ನಿಸಿದರು. ಎಲ್ಲವನ್ನೂ ಸಿದ್ದಪಡಿಸಿಕೊಳ್ಳಲಾಗಿದೆ., ತಾವು ರಜೆ ಮೇಲೆ ಇದ್ದುದರಿಂದ ಸಹಿ ಪಡೆಯಲು ಸಾಧ್ಯವಾಗಿಲ್ಲವೆಂದು ತಿಳಿಸಿದ ತಾವು, ಈ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಲು ಕರೆ ಮಾಡಿದಾಗ ತಾವು ಕರೆ ಸ್ವೀಕರಿಸಲಿಲ್ಲವೆಂದು ತಿಳಿಸಿದೆ. ಆಗ ಆಯುಕ್ತರು ನನ್ನ ಮೊಬೈಲ್ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಾನಸಿಕವಾಗಿ ಹಿಂಸೆ ನೀಡಿ ದೌರ್ಜನ್ಯವೆಸಗಿದ್ದಾರೆ.
- ಕೆ.ಎಸ್.ಈಶ್ವರ್, ಆಯುಕ್ತೆಯಿಂದ ನಿಂದನೆಗೊಳಗಾದ ಆರೋಗ್ಯ ನಿರೀಕ್ಷಕ
ಆಯುಕ್ತರು ಎಲ್ಲರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನಗರಸಭೆಯಲ್ಲಿ ಓರ್ವ ಎಇಇ, ಓರ್ವ ಎಇ ಹಾಗೂ ನಾಲ್ವರು ಕಿರಿಯ ಇಂಜಿನಿಯರ್ ಗಳಿರಬೇಕು. ಆದರೆ ಇಲ್ಲಿ 2 ಕಿರಿಯ ಇಂಜಿನಿಯರ್ ಗಳು ಮಾತ್ರ ಇದ್ದಾರೆ. ಆದರೂ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ, ಆಯುಕ್ತರೇ ನಮಗೆ ಸಹಕಾರ ನೀಡುತ್ತಿಲ್ಲ.
- ಮುಂಜುನಾಥ್, ಎ.ಇ.ಇ.
ಕಳೆದ 2 ತಿಂಗಳಿನಿಂದ ಪೌರಕಾರ್ಮಿಕರ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ಆಯುಕ್ತರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಸಂಬಳ ಸಿಗದೆ ಈ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ದಲಿತರು ಎಂಬ ಕಾರಣಕ್ಕೆ ಆಯುಕ್ತರು ನೌಕರರನ್ನು ಕೀಳಾಗಿ ಕಾಣುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
-ನಾಗರಾಜ್, ಪೌರಸೇವಾ ನೌಕರರ ಸಂಘದ ಮುಖಂಡ
ನಾನು ಯಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ, ಸರಿಯಾದ ಸಮಯಕ್ಕೆ ಕೆಲಸ ಮಾಡಿ ಎಂದು ಹೇಳುವುದೇ ತಪ್ಪೆ. ಎಇಇ ಮಂಜುನಾಥ್ ಅವರೇ ಈ ಘಟನೆಗಳಿಗೆ ಕಾರಣಕರ್ತರು. ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯೇ ವಾಸವಾಗಿರಬೇಕೆಂಬ ಕಾನೂನು ಮೀರಿ ಅವರು ಹಾಸನದಿಂದ ಪ್ರತಿನಿತ್ಯ ಓಡಾಡುತ್ತಿದ್ದಾರೆ. ಕೇಂದ್ರ ಸ್ಥಳದಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳುವಂತಿಲ್ಲವೇ? ಸಿಬ್ಬಂದಿ ತಮ್ಮ ವಿರುದ್ಧ ಗುಂಪುಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಕೆಲಸ ಮಾಡಿ ಎನ್ನುವುದು ತಪ್ಪೇ. ಮನೆಯ ಮುಖ್ಯಸ್ಥಳಂತೆ ತಾನು ಕೆಲ ನೌಕರರಿಗೆ ಬುದ್ಧಿವಾದ ಹೇಳಿದ್ದೇನಷ್ಟೇ, ನಗರಸಭೆ ಆಯುಕ್ತೆಯಾಗಿ ಸಿಬ್ಬಂದಿಯಿಂದ ಪ್ರಾಮಾಣಿಕ ಕೆಲಸ ನಿರೀಕ್ಷಿಸುವುದು ತಪ್ಪೇ?
- ತುಷಾರಮಣಿ, ನಗರಸಭೆ ಆಯುಕ್ತೆ.