×
Ad

ದಾವಣಗೆರೆ: 2ನೇ ದಿನವೂ ಮುಂದುವರೆದ ಬ್ಯಾಂಕ್ ನೌಕರರ ಮುಷ್ಕರ

Update: 2018-05-31 22:36 IST

ದಾವಣಗೆರೆ,ಮೇ.31: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬ್ಯಾಂಕ್ ನೌಕರರು ನಡೆಸುತ್ತಿರುವ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ವಹಿವಾಟು ಸ್ಥಗಿತಗೊಂಡಿದ್ದರಿಂದ ಗ್ರಾಹಕರು ಪರದಾಡುವಂತಾಯಿತು. 

ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಗುರುವಾರ ಬ್ಯಾಂಕ್ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಕೆನರಾ ಬ್ಯಾಂಕ್‍ನ ಮಂಡಿಪೇಟೆ ಶಾಖೆ ಎದುರು ಮತ ಪ್ರದರ್ಶನ ಮತ್ತು ಮುಷ್ಕರ ನಡೆಸುವ ಮೂಲಕ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. 

ಈ ಸಂದರ್ಭ ಮಾತನಾಡಿದ ವೇದಿಕೆ ಸಂಚಾಲಕ ಕೆ.ರಾಘವೇಂದ್ರ ನಾಯರಿ, ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ 11ನೇ ದ್ವಿಪಕ್ಷೀಯ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ತಳೆದ ನಕಾರಾತ್ಮಕ ಧೋರಣೆ ವಿರೋಧಿಸಿ ದೇಶಾದ್ಯಂತ ಯುಎಸ್‍ಬಿಯು ಕರೆ ನೀಡಿರುವ 2 ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲೇ ಸಾವಿರಾರು ಕೋಟಿ ವ್ಯವಹಾರ ಸ್ಥಗಿತಗೊಂಡಿದೆ ಎಂದರು. 

ಜಿಲ್ಲಾದ್ಯಂತ ಸುಮಾರು 150 ಬ್ಯಾಂಕ್ ಶಾಖೆಗಳು ಕಾರ್ಯ ನಿರ್ವಹಿಸಿಲ್ಲ. 1200ಕ್ಕೂ ಹೆಚ್ಚು ಬ್ಯಾಂಕ್ ಉದ್ಯೋಗಿಗಳು ಕಳೆದೆರೆಡು ದಿನಗಳಿಂದ ನಡೆಯುತ್ತಿರುವ ಮುಷ್ಕರದಲ್ಲಿ ಭಾಗಿಯಾಗಿದ್ದು, ವೇತನ ಪರಿಷ್ಕರಣೆಗೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರ, ಐಬಿಎ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ತ್ವರಿತವಾಗಿ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮುಷ್ಕರದ ಮೂಲಕ ಒತ್ತಾಯಿಸಲಾಗುತ್ತಿದೆ ಎಂದರು. 

ಕೇವಲ ಹೊಸ ತರೆಮಾರಿನ ಕೆಲ ಖಾಸಗಿ ಬ್ಯಾಂಕ್‍ಗಳು, ಸಹಕಾರಿ ಬ್ಯಾಂಕ್‍ಗಳು ಹಾಗೂ ಗ್ರಾಮೀಣ ಬ್ಯಾಂಕ್‍ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಶೇ.90ರಷ್ಟು ಬ್ಯಾಂಕ್‍ಗಳ ಸೇವೆ ಸ್ಥಗಿತಗೊಂಡಿದೆ. 1.11.2017ರಿಂದ ಜಾರಿಗೊಳ್ಳಬೇಕಿದ್ದ ಬ್ಯಾಂಕ್ ಉದ್ಯೋಗಿಗಳ 11ನೇ ವೇತನ ಪರಿಷ್ಕರಣೆ ಕೇಂದ್ರ, ಐಬಿಐಗಳ ಬ್ಯಾಂಕ್ ಉದ್ಯೋಗಿ ವಿರೋಧಿ ಧೋರಣೆಯಿಂದಾಗಿ ಇನ್ನೂ ಜಾರಿಗೊಂಡಿಲ್ಲ. ಇಂದು ಬ್ಯಾಂಕ್‍ಗಳು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸರ್ಕಾರದ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಮಹತ್ತರ ಜವಾಬ್ಧಾರಿ ಸಹ ಹೊಂದಿವೆ ಎಂದು ಅವರು ವಿವರಿಸಿದರು.

ಸರ್ಕಾರಿ ಯೋಜನೆ ಕಾರ್ಯಗತಗೊಳಿಸುವಲ್ಲಿ ತೊಡಗಿದ್ದರಿಂದ ತಮ್ಮ ಮೂಲ ಬ್ಯಾಂಕಿಂಗ್ ಕಾರ್ಯ ಕ್ಷಮತೆಗೆ ಧಕ್ಕೆಯಾಗುತ್ತಿದೆ. ಇಷ್ಟೆಲ್ಲಾ ಒತ್ತಡದ  ಮಧ್ಯೆಯೂ 2016-17ನೇ ಆರ್ಥಿಕ ಸಾಲಿನಲ್ಲಿ ಸರ್ಕಾರಿ ಬ್ಯಾಂಕ್‍ಗಳು 158982 ಕೋಟಿ ಲಾಭ ಮಾಡಿವೆ. ಆದರೆ, ವಸೂಲಾಗದ ಸಾಲಕ್ಕೆ 179370 ಕೋಟಿ ಮೀಸಲಿಟ್ಟ ಪರಿಣಾಮ ಒಟ್ಟು 113888 ಕೋಟಿ ನಷ್ಟ ಅನುಭವಿಸ ಬೇಕಾಗಿದೆ. ಆದರೆ, ಇಂತಹ ನಷ್ಟಕ್ಕೆ ಸರ್ಕಾರ ಮತ್ತು ಬ್ಯಾಂಕ್‍ಗಳ ನೀತಿ ಕಾರಣವೇ ಹೊರತು, ಬ್ಯಾಂಕ್‍ಗಳ ಉದ್ಯೋಗಿಗಳಲ್ಲವೆಂಬುದನ್ನು ಕೇಂದ್ರ ಸರ್ಕಾರ, ಐಬಿಎ ಅರಿಯಲಿ ಎಂದರು. 

ಸಂಘಟನೆ ಮುಖಂಡರಾದ ಕೆ.ಎನ್. ಗಿರಿರಾಜ, ಹರೀಶ ಪೂಜಾರಿ, ಜಿ.ರಂಗಸ್ವಾಮಿ, ಅಜಿತಕುಮಾರ ನ್ಯಾಮತಿ, ಎಸ್. ಪ್ರಶಾಂತ, ಕೆ.ವಿಶ್ವನಾಥ ಬಿಲ್ಲವ, ಎಚ್.ಎಸ್.ತಿಪ್ಪೇಸ್ವಾಮಿ, ವಾಗೀಶ, ಪಿ.ಆರ್. ಪುರುಷೋತ್ತಮ, ಪಿಗ್ಮಿ ಸಂಗ್ರಹಕಾರರ ಸಂಘಟನೆ ಎಂ.ಎಸ್. ಸೋಮಶೇಶರ, ವಿಮಾ ಕ್ಷೇತ್ರದ ಎಚ್.ಪಾಲಾಕ್ಷಪ್ಪ, ಆರ್. ಪುಟ್ಟರಾಜು, ಎಂ.ಎಚ್. ಜಮೀರ್ ಅಹಮ್ಮದ್, ಎಸ್.ಪ್ರಶಾಂತ, ವಿ. ನಂಜುಂಡೇಶ್ವರ, ಜಿ. ರಂಗಸ್ವಾಮಿ, ದತ್ತಾತ್ರೇಯ ಮೇಲಗಿರಿ, ಎಚ್. ಸುಗೂರಪ್ಪ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News