×
Ad

ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಈಜುಗಾರಿಕೆ ತರಬೇತಿ ಶ್ಲಾಘನೀಯ: ಗೋಪಾಲ್ ಬಿ.ಹೊಸೂರ್

Update: 2018-05-31 22:45 IST

ಮೈಸೂರು,ಮೇ.31: ಎಳೆಯ ವಯಸ್ಸಿನಲ್ಲಿಯೇ ಮಕ್ಕಳನ್ನು ಈಜುಗಾರಿಕೆಯ ಕ್ರೀಡೆಗೆ ಕರೆತಂದು ನೀರಿಗಿಳಿಸಿ ಧೈರ್ಯದಿಂದ ಪ್ರೋತ್ಸಾಹ ನೀಡುತ್ತಿರುವ ಪೋಷಕರು ಮತ್ತು ತರಬೇತುದಾರರ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷ ಗೋಪಾಲ್ ಬಿ.ಹೊಸೂರ್ ತಿಳಿಸಿದರು.

ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಬ್-ಜೂನಿಯರ್ ಮತ್ತು ಜೂನಿಯರ್ ಸ್ವಿಮಿಂಗ್ ವಾಟರ್ ಪೋಲೊ ಹಾಗೂ ಡೈವಿಂಗ್ ಚಾಂಪಿಯನ್ ಶಿಷ್ 2018 ಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇಂದು ಅತ್ಯಂತ ಸಂತೋಷ ಸಂಭ್ರಮದ ದಿನ. ಅಭೂತ ಪೂರ್ವ ಸ್ಪರ್ಧೆಯಿದೆ. 700 ಸ್ಪರ್ಧಿಗಳು ಜೂನಿಯರ್, ಸಬ್ ಜೂನಿಯರ್ ನಲ್ಲಿ ಭಾಗವಹಿಸುತ್ತಿದ್ದಾರೆ. ಯಾವತ್ತೂ ಇಷ್ಟೊಂದು ಮಂದಿ ಭಾಗವಹಿಸಿರಲಿಲ್ಲ. ಎಳೆಯ ವಯಸ್ಸಿನಲ್ಲಿರತಕ್ಕ ನಿಮ್ಮ ಮಕ್ಕಳನ್ನು ಈಜುಗಾರಿಕೆಯಂತಹ ಕ್ರೀಡೆಯಲ್ಲಿ ಕರೆತಂದು ನೀರಿಗಿಳಿಸಿ ಧೈರ್ಯದಿಂದ ತರಬೇತುಗೊಳಿಸಿ ಅವರನ್ನು ಸ್ಪರ್ಧಾಳುಗಳಾಗುವ ಮಟ್ಟಕ್ಕೆ ತಂದಿದ್ದೀರಿ. ಅದಕ್ಕೆ ಪೋಷಕರು ಮತ್ತು ತರಬೇತುದಾರರಿಗೆ ಹೃದಯಾಂತರಾಳದ ಅಭಿನಂದನೆಗಳು ಎಂದರು. 

ಸ್ಪರ್ಧಾಳುಗಳು ಈ ಹಂತಕ್ಕೆ ತಲುಪಲು ತಮ್ಮೆಲ್ಲಾ ಪ್ರಯತ್ನವನ್ನೂ ಹಾಕಿ ಅವರನ್ನು ಈಜುಪಟುವನ್ನಾಗಿ ಮಾಡಿದ್ದಾರೆ. ಅವರ ಪ್ರಯತ್ನವಿಲ್ಲದಿದ್ದರೆ ಸ್ಪರ್ಧಾಳುಗಳು ಈ ಮಟ್ಟ ತಲುಪಲು ಸಾಧ್ಯವಿರಲಿಲ್ಲ ಎಂದರು.

ಮೈಸೂರು ಜಿಲ್ಲಾ ಈಜು ಸಂಸ್ಥೆಯು ಚಟುವಟಿಕೆಯಿಂದ ಕೂಡಿದೆ. ಈಜುಗಾರಿಕೆಯ ಕುರಿತು ಆಸಕ್ತಿಯನ್ನು ಹೊಂದಿದ್ದು, ನಿರಂತರ ಸಲಹೆ ಸೂಚನೆಗಳನ್ನು ಪಡೆಯುತ್ತದೆ. ಕ್ರೀಡಾಕೂಟವನ್ನು ವ್ಯವಸ್ಥೆ ಮಾಡುವುದು ಸರಳವಾದ ಕೆಲಸವಲ್ಲ. ಹಣಕಾಸು ವ್ಯವಸ್ಥೆ  ಸರಿಯಾಗಿರಬೇಕು. ನೂರೆಂಟು ಸಮಸ್ಯೆಗಳನ್ನು ಎದುರಿಸಬೇಕು. ಈಜುಕೊಳ ಸಿಗಬೇಕು. ಈಜುಕೊಳದ ವ್ಯವಸ್ಥೆ ಸರಿಯಾಗಿರಬೇಕು. ಹೀಗೆ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು. ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿಯೇ ಮಾಡಿದ್ದಾರೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ಈಜು ಸಂಸ್ಥೆ ಅತ್ಯುತ್ತಮ ಸಂಸ್ಥೆ. ಒಳ್ಳೆಯ ಫಲಿತಾಂಶವನ್ನು ನೀಡುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. 27ವರ್ಷದಿಂದ ನ್ಯಾಶನಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗುಣಮಟ್ಟದ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದೆ ಎಂದು ವಿವರಿಸಿದರು. 

ಸ್ವಿಮ್ ಇಂಡಿಯಾ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಈಜು ಚಟುವಟಿಕೆ ಕುರಿತ ಎಲ್ಲವೂ ಒಂದೇ ಬಟನ್ ನಡಿ ಲಭ್ಯವಾಗುವಂತೆ ಮಾಡಲು ಡಿಜಿಟಲೈಜ್ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೇ ದಾಖಲೆ ನಿರ್ಮಾಣ ಮಾಡಿದವರಿಗೆ ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ನ್ಯಾಶನಲ್ ಮಾನಿಟರಿ ಅವಾರ್ಡ್ ಕೂಡ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸ್ವಿಮಿಂಗ್ ಫೇಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ಟಿ.ಡಿ.ವಿಜಯರಾಘವನ್, ದೈಹಿಕ ಶಿಕ್ಷಣ ವಿಭಾಗದ ಕಾರ್ಯಭಾರ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಮೈಸೂರು ಜಿಲ್ಲಾ ಈಜು ಸಂಸ್ಥೆಯ ಅಧ್ಯಕ್ಷ ಡಾ.ಸಿ.ಕೃಷ್ಣ, ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News