ತೈಲ ಬೆಲೆ ಏರಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ
ಮೈಸೂರು,ಮೇ.31: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿದ್ದು, ಜನಸಾಮಾನ್ಯರಿಗೆ ಜೀವನ ನಿರ್ವಹಣೆ ದುಸ್ತರವಾಗಿದೆ ಎಂದು ಹೇಳಿದರಲ್ಲದೇ, ದ್ವಿಚಕ್ರ ವಾಹನವನ್ನು ತಳ್ಳುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಪ್ರಧಾನಿ ನರೇಂದ್ರ ಮೋದಿ ಅಚ್ಛೇ ದಿನ್ ಕೊಡುತ್ತೇನೆ ಎಂದು ಹೇಳಿ ಸಾಮಾನ್ಯ ಜನರ ಬದುಕನ್ನು ಕತ್ತಲೆಗೊಳಿಸುತ್ತಿದ್ದಾರೆ. ಡಾಲರ್ ರೂಪದಲ್ಲಿ ಪಡೆದುಕೊಳ್ಳುತ್ತಿರುವ ಕಚ್ಛಾತೈಲ ಆಮದು ಬೆಲೆ ಕಡಿಮೆಗೊಂಡರೂ ಪೆಟ್ರೋಲ್ ಡೀಸೆಲ್ ಕಡಿಮೆಗೊಳಿಸಿಲ್ಲ, ನಮ್ಮ ಜನರ ಸ್ಥಿತಿಗತಿ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಯವೇ ಇಲ್ಲ. ಮೋದಿಯವರು ಪ್ರವಾಸ ಪ್ರಿಯರು ಎನಿಸುತ್ತದೆ ಅದಕ್ಕೆ ದಿನಕ್ಕೊಂದು ದೇಶಗಳಿಗೆ ಭೇಟಿ ಕೊಡುತ್ತಿದ್ದಾರೆ. ದೇಶದ ಪ್ರಧಾನಿ ಆಗುವ ಬದಲು ವಿದೇಶಾಂಗ ಸಚಿವರಾಗಿದ್ದರೆ ಸರಿಯಾಗುತ್ತಿತ್ತು ಎಂದು ವ್ಯಂಗ್ಯವಾಡಿದರು.
ಕೂಡಲೇ ಪೆಟ್ರೋಲ್, ಡಿಸೇಲ್ ದರ ಇಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಧಾಕೃಷ್ಣ, ಬೀಡಾ ಬಾಬು, ಲೊಕೇಶ್, ಮಹೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.