×
Ad

ಚಿಕ್ಕಮಗಳೂರು: ತಳ್ಳುಗಾಡಿ ವ್ಯಾಪಾರಿಗಳಿಂದ ಅಕ್ರಮ ನೆಲ ಬಾಡಿಗೆ ವಸೂಲಿ; ಆರೋಪ

Update: 2018-06-01 22:14 IST

ಚಿಕ್ಕಮಗಳೂರು, ಜೂ.1: ಉದ್ಯೋಗವಿಲ್ಲದೇ ಜೀವನೋಪಾಯಕ್ಕಾಗಿ ಸಾಲ ಸೂಲ ಮಾಡಿಕೊಂಡು ತಳ್ಳುಗಾಡಿಗಳ ಮೂಲಕ ತಿಂಡಿ, ತನಿಸುಗಳನ್ನು ಮಾರುತ್ತಾ ಬದುಕು ಕಟ್ಟಿಕೊಂಡಿರುವ ಬಡ ವ್ಯಾಪಾರಿಗಳನ್ನು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಗುತ್ತಿಗೆದಾರರ ಮೂಲಕ ಸುಲಿಗೆ ಮಾಡುತ್ತಿದ್ದು, ಈ ಬಗ್ಗೆ ಸಂಬಂಧಿಸಿದವರಿಗೆ ಸಂಪೂರ್ಣ ಮಾಹಿತಿ ಇದ್ದರೂ ಯಾವುದೇ ಕ್ರಮ ವಹಿಸದಿರುವುದರಿಂದ ಬಡ ವ್ಯಾಪಾರಿಗಳು ನಿರಂತರವಾಗಿ ಶೋಷಣೆಗೊಳಗಾಗುತ್ತಿದ್ದಾರೆಂಬ ಆರೋಪ ನಗರದಾದ್ಯಂತ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಸಾವಿರಾರು ನಿರುದ್ಯೋಗಿಗಳು, ವಯೋವೃದ್ಧರು, ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗಾಗಿ ಸಾಲ ಸೂಲ ಮಾಡಿಕೊಂಡು ತಳ್ಳುಗಾಡಿಗಳು, ಆಟೊ ಮತ್ತಿತರ ವಾಹನಗಳನ್ನು ಖರೀದಿಸಿ ಅವುಗಳ ಮೂಲಕ ಸಂಜೆ ಹಾಗೂ ಬೆಳಗಿನ ಹೊತ್ತು ವಿವಿಧ ಬಗೆಯ ಆಹಾರ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಂದ ಆದಾಯದಲ್ಲಿ ಕುಟುಂಬ ನಿರ್ವಹಣೆಯೊಂದಿಗೆ ಸಾಲ ಮರು ಪಾವತಿ ಮಾಡಲು ಹೆಣಗಾಡುತ್ತಿದ್ದಾರೆ. ನಗರದ ರಸ್ತೆ ಬದಿಯ ಫುಟ್‍ಪಾತ್ ಸೇರಿದಂತೆ ಇಕ್ಕೆಲಗಳಲ್ಲಿ ಸ್ಥಳಾವಕಾಶ ಇದ್ದಲ್ಲೆಲ್ಲಾ ಇಂತಹ ತಳ್ಳುಗಾಡಿ ಸೇರಿದಂತೆ ಇತರ ವಾಹನಗಳ ಮೂಲಕ ಬಡ ವ್ಯಾಪಾರಿಗಳು ಸ್ವ ಉದ್ಯೋಗದ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ.

ಇಂತಹ ವ್ಯಾಪಾರಿಗಳು ನಗರಸಭೆ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ನಗರಸಭೆ ಈ ವ್ಯಾಪಾರಿಗಳಿಂದ ನಿಗದಿತ ಶುಲ್ಕ ನಿಗದಿ ಮಾಡಿ ಪ್ರತೀ ದಿನ ನೆಲ ಬಾಡಿಗೆಯನ್ನು ಸುಂಕದ ರೂಪದಲ್ಲಿ ವಸೂಲಿ ಮಾಡುತ್ತಿದೆ. ಆದರೆ ನಗರಸಭೆಯು ಈ ಸುಂಕ ವಸೂಲಿ ಪ್ರಕ್ರಿಯೆಯನ್ನು ಹರಾಜು ಕೂಗಿ ಗುತ್ತಿಗೆದಾರರ ಮೂಲಕ ನೆಲ ಬಾಡಿಗೆ ವಸೂಲಿ ಮಾಡಲು ಕ್ರಮಕೈಗೊಂಡಿದೆ. ಬಡ ವ್ಯಾಪಾರಿಗಳಿಂದ ನೆಲ ಬಾಡಿಗೆ ವಸೂಲಿ ಮಾಡುವ ಗುತ್ತಿಗೆದಾರರು ತಳ್ಳುಗಾಡಿಗಳು, ನಿಂತ ಗಾಡಿಗಳ ವ್ಯಾಪಾರಿಗಳಿಂದ ನಗರಸಭೆ ನಿಗದಿ ಮಾಡಿದ ಶುಲ್ಕ ವಸೂಲಿ ಮಾಡದೇ ಮನಸೋಇಚ್ಛೆ ಬಾಡಿಗೆ ವಸೂಲಿ ಮಾಡುವ ದಂಧೆಗಿಳಿದ್ದಾರೆಂಬ ಆರೋಪ ಈ ಬಡ ವ್ಯಾಪಾರಿಗಳಿಂದ ಕೇಳಿ ಬರುತ್ತಿದೆ.

ನಗರಸಭೆಯು ವಾರ್ಷಿಕ 12-15 ಲಕ್ಷಕ್ಕೆ ನೆಲ ಬಾಡಿಗೆ ವಸೂಲಿ ಮಾಡಲು ಟೆಂಡರ್ ಕರೆದಿದ್ದು, ಈ ಟೆಂಡರ್ ಗುತ್ತಿಗೆ ಪಡೆದವರು ನಗರಸಭೆ ನಿಗದಿ ಮಾಡಿದ ನೆಲ ಬಾಡಿಗೆ ವಸೂಲಿ ಮಾಡದೇ ತಮಗೆ ಬೇಕಾದ ರೀತಿಯಲ್ಲಿ ದೊಡ್ಡ ಸಣ್ಣ ಅಂಗಡಿಗಳ ಆಧಾರದ ಮೇಲೆ ಮನ ಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದಾರೆಂದು ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ. ನಗರಸಭೆಯು ಇಂತಹ ತಳ್ಳುಗಾಡಿ, ನಿಂತಗಾಡಿಗಳ ವ್ಯಾಪಾರಿಗಳಿಗೆ ಕೇವಲ 10 ರೂ. ನೆಲ ಬಾಡಿಗೆ ನಿಗದಿ ಮಾಡಿದ್ದು, ಗುತ್ತಿಗೆದಾರರು ನಿಗದಿತ ನೆಲ ಬಾಡಿಗೆ ಬಿಟ್ಟು ಅಕ್ರಮವಾಗಿ ತಾವೇ ನಿರ್ಧರಿಸಿಕೊಂಡ ಬಾಡಿಗೆಯನ್ನು ವ್ಯಾಪಾರಿಗಳಿಂದ ವಸೂಲಿ ಮಾಡುತ್ತಿದ್ದಾರೆಂದು ವ್ಯಾಪಾರಿಗಳು ದೂರಿದ್ದಾರೆ.

ನಗರಸಭೆ 10 ರೂ. ಶುಲ್ಕ ನಿಗದಿ ಮಾಡಿದ್ದರೂ ಬಹುತೇಕ ಅಂಗಡಿಗಳಿಂದ ಅಕ್ರಮವಾಗಿ 20 ರೂ. ನಿಂದ 50 ರೂ. ವರೆಗೆ ನೆಲ ಬಾಡಿಗೆಯನ್ನು ವಸೂಲಿ ಮಾಡುತ್ತಾ ಬಡ ವ್ಯಾಪಾರಿಗಳು ಗಳಿಸುವ ಅಲ್ಪ ಆದಾಯಕ್ಕೂ ಗುತ್ತಿಗೆದಾರರು ಕನ್ನ ಹಾಕುತ್ತಿದ್ದಾರೆ. 30 ರೂ. ಬಾಡಿಗೆ ನೀಡಿದವರಿಗೂ 10 ರೂ. ಎಂದು ಮುದ್ರಿಸಿರುವ ರಶೀದಿ ನೀಡಲಾಗುತ್ತಿದೆ, 50 ರೂ. ನೀಡಿದರವರಿಗೂ 10 ರೂ. ನ ರಶೀದಿ ನೀಡಲಾಗುತ್ತಿದೆ. 50 ರೂ. ರೂ. ನೆಲ ಬಾಡಿಗೆ ನೀಡಿದವರು 50 ರೂ.ನ ಶುಲ್ಕ ಕೇಳಿದರೆ 10 ರೂ. ಎಂದು ಮುದ್ರಿಸಿರುವ 5 ರಶೀದಿಗಳನ್ನು ನೀಡುತ್ತಿದ್ದಾರೆ. ಈ ಅಕ್ರಮ ಬಾಡಿಗೆ ವಸೂಲಿ ದಂಧೆಯ ಬಗ್ಗೆ ನಗರಸಭೆಯ ಎಲ್ಲ ಸದಸ್ಯರು, ಅಧಿಕಾರಿಗಳಿಗೂ ಮಾಹಿತಿ ಇದೆ. ಆದರೆ ಗುತ್ತಿಗೆದಾರರು ನಗರಸಭೆ ಆಡಳಿತ ಪಕ್ಷದವರೊಂದಿಗೆ ಶಾಮೀಲಾಗಿರುವುದರಿಂದ ಈ ಬಗ್ಗೆ ಯಾರು ಪ್ರಶ್ನೆ ಮಾಡುತ್ತಿಲ್ಲ. ನಾವು ಸಂಬಂಧಿಸಿದವರಿಗೆ ದೂರು ಹೇಳಿದರೂ ಪ್ರಯೋಜವಾಗುತ್ತಿಲ್ಲ. ಈ ಕಾರಣಕ್ಕೆ ಗುತ್ತಿಗೆದಾರರಿಗೆ ಹಿಡಿ ಶಾಪ ಹಾಕಿಕೊಂಡೇ ನೆಲ ಬಾಡಿಗೆ ಪಾವತಿ ಮಾಡುತ್ತಿದ್ದೇವೆ ಎಂದು ನಗರದ ಆಜಾದ್ ಪಾರ್ಕ್‍ನಲ್ಲಿ ತಳ್ಳುಗಾಡಿ ಮೂಲಕ ವ್ಯಾಪಾರ ಮಾಡುತ್ತಿರುವ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ವಾರ್ತಾಭಾರತಿ ಬಳಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ನಗರದಲ್ಲಿ ಪ್ರತೀ ಬುಧವಾರ ನಡೆಯುವ ಸಂತೆ ದಿನದಂದು ಸಂತೆ ವ್ಯಾಪಾರಿಗಳಿಂದಲೂ ನಗರಸಭೆ ಸುಂಕ ವಸೂಲಿ ಮಾಡುತ್ತಿದ್ದು, ನಗರದ ಸಂತೆ ವ್ಯಾಪಾರಿಗಳಿಂದಲೂ ಇದೇ ಮಾದರಿಯಲ್ಲಿ ಮನಬಂದಂತೆ ನೆಲ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ನಾವು ಗುತ್ತಿಗೆದಾರರು ಕೇಳಿದಷ್ಟು ನೆಲ ಬಾಡಿಗೆ ನೀಡಬೇಕು. ಹೆಚ್ಚು ಮಾತನಾಡುವಂತಿಲ್ಲ. ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ. ನಗರಸಭೆಗೆ ದೂರು ಕೊಡಿ ಎನ್ನುತ್ತಾರೆ. ದೂರು ನೀಡಿದರೆ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯವನ್ನೂ ಕಲ್ಪಿಸಿಲ್ಲ ಎಂದು ಎಂದು ಸಂತೆ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ನಗರಸಭೆಯು ಗುತ್ತಿಗೆದಾರರ ಮೂಲಕ ನೆಲ ಬಾಡಿಗೆ ವಸೂಲಿ ಮಾಡುವುದು ಸರಿಯಲ್ಲ. ಗುತ್ತಿಗೆದಾರರು ಅತಿಯಾಸೆಯಿಂದ ವ್ಯಾಪಾರಿಗಳಿಂದ ಹೆಚ್ಚು ಶುಲ್ಕ ವಸೂಲಿ ಮಾಡುತ್ತಾರೆ. ನಗರಸಭೆ ಸಿಬ್ಬಂದಿ ಮೂಲಕವೇ ಶುಲ್ಕ ವಸೂಲಿ ಮಾಡಿಸಿದಲ್ಲಿ ನಿಯಮಗಳ ಉಲ್ಲಂಘನೆಯಾಗುವುದಿಲ್ಲ. ನಿಗದಿತ ಶುಲ್ಕವನ್ನೇ ವಸೂಲಿ ಮಾಡಲು ಸಾಧ್ಯ.
-ಕುಮಾರ್, ರೈತ ಮುಖಂಡರು, ಬೀದಿ ಬದಿಯ ವ್ಯಾಪಾರಿ

ನಗರಸಭೆ ವ್ಯಾಪ್ತಿಯಲ್ಲಿ ತಳ್ಳುಗಾಡಿ, ನಿಂತಗಾಡಿಗಳ ಮೂಲಕ ವ್ಯಾಪಾರ ಮಾಡುವವರಿಂದ ನೆಲ ಬಾಡಿಗೆ ವಸೂಲಿ ಮಾಡಲು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ನಿಗದಿತ ಶುಲ್ಕವನ್ನು ಮಾತ್ರ ವಸೂಲಿ ಮಾಡಬೇಕು. ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುವುದು ಅಕ್ರಮವಾಗಿದೆ. ಗುತ್ತಿಗೆದಾರರು ನಿಗದಿತ ಶುಲ್ಕಕ್ಕಿಂತ ಹೆಚ್ಚು ಮಾಡುತ್ತಿದ್ದಲ್ಲಿ ವ್ಯಾಪಾರಿಗಳು ನಗರಸಭೆಗೆ ದೂರು ನೀಡಬೇಕು.
- ಹಿರೇಮಗಳೂರು ಪಟ್ಟಸ್ವಾಮಿ, ನಗರಸಭೆ ಸದಸ್ಯ

Writer - ವರದಿ: ಕೆ.ಎಲ್.ಶಿವು

contributor

Editor - ವರದಿ: ಕೆ.ಎಲ್.ಶಿವು

contributor

Similar News