ಮೈಸೂರು: ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2018-06-01 17:09 GMT

ಮೈಸೂರು,ಜೂ.1: ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮಿಶ್ರ ಸರ್ಕಾರ ರಚನೆಯಾಗಿ ಉತ್ತಮ ಜನಾಡಳಿತಕ್ಕೆ ಮುಂದಾಗಿರುವುದನ್ನು ಸಹಿಸಿಕೊಳ್ಳದ ಬಿಜೆಪಿ ಪಕ್ಷ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ- ಈಡಿ ನೆಪವೊಡ್ಡಿ ವಿನಾಕಾರಣ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಶ್ರೀನಾಥ್ ಬಾಬು ರವರ ನೇತೃತ್ವದಲ್ಲಿ ಮೈಸೂರು ಕಾಂಗ್ರೆಸ್ ನಗರ ಘಟಕದ ಪದಾಧಿಕಾರಿಗಳು ರೈಲ್ವೆ ನಿಲ್ದಾಣದ ಮುಂಭಾಗದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದ ಬಳಿಯಿಂದು ಪ್ರತಿಭಟನೆ ನಡೆಸಿದರು. ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ವಿರೋಧಿಸಿ ಕೆಲಕಾಲ ಮೋದಿ ಅಮಿತ್ ಶಾ ವಿರುದ್ಧ  ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು,

ಇದೇ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಮಾತನಾಡಿ, ಭಾರತದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಸಂಘಟಿತರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದೊಂದಿಗೆ ದೇಶಪ್ರೇಮ ಮನೋಭಾವ ವ್ಯಕ್ತಿತ್ವದ ಸಂದೇಶ ನೀಡಿದ್ದಾರೆ. ನೇರನುಡಿ ಗಾಂಧಿತತ್ವ ಪಾಲಿಸಿದವರು, ಆದರೆ ಬಿಜೆಪಿಯ ಕೆಲವು ರಾಜಕಾರಣಿಗಳು ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದು, ಶಾಂತಿ ಸುವ್ಯವಸ್ಥೆಯನ್ನು ಕದಡುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷ ಆದಾಯ ತೆರಿಗೆ ಇಲಾಖೆಯನ್ನು ರಾಜಕೀಯದ ದಾಳವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಭ್ರಷ್ಟಾಚಾರ, ರೈತರ ಭೂಕಬಳಿಕೆಯ ಪ್ರಕರಣದಲ್ಲಿ ಹೆಚ್ಚಾಗಿ ತೊಡಗಿರುವುದು ಬಿಜೆಪಿಯ ಜನಪ್ರತಿನಿಧಿಗಳು. ಹಾಗಾಗಿ  ಕೇವಲ ಮಾತನಾಡುವ ಜಾದೂಗಾರ ಮೋದಿ, ಅಮಿತ್ ಶಾ ತಮ್ಮ ತಪ್ಪಿನ ನಡೆಯನ್ನು ತಿದ್ದಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಜಿ. ರಾಘವೇಂದ್ರ, ಎಸ್.ಟಿ ಘಟಕದ ಸುಂದರ ಕುಮಾರ್, ಮಾಜಿ ಮೇಯರ್ ಬಿ.ಕೆ.ಪ್ರಕಾಶ್, ಗಿರೀಶ್, ವಿನಯ್ ಕಣಗಾಲ್, ಮೊಗ್ಗಣ್ಣಾಚಾರ್, ದುರ್ಗೆಶ್, ಡೈರಿ ವೆಂಕಟೇಶ್, ಶಿವಲಿಂಗಪ್ಪ, ಲೋಕೆಶ್ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News