ಉಪಚುನಾವಣೆಯ ಫಲಿತಾಂಶದಲ್ಲಿ ಕಲಿಯಬೇಕಾದ ಪಾಠ

Update: 2018-06-01 18:34 GMT

ಈ ಬಾರಿಯ ಉಪಚುನಾವಣೆಯಲ್ಲಿ ರಾಜ್ಯದ ಪಾಲಿಗೆ ರಾಜರಾಜೇಶ್ವರಿ ಕ್ಷೇತ್ರದ ಫಲಿತಾಂಶ ಗಮನಾರ್ಹವಾಗಿದ್ದರೆ, ದೇಶ ಉತ್ತರಪ್ರದೇಶದ ಕೈರಾನ ಲೋಕಸಭೆಯ ಕಡೆಗೆ ಕಣ್ಣು ನೆಟ್ಟಿತ್ತು. ಚುನಾವಣೆಯ ಗೆಲುವು ಓರ್ವ ಅಭ್ಯರ್ಥಿಯ ಮೇಲಿನ ಕಳಂಕಗಳನ್ನು ತೊಳೆದು ಹಾಕುತ್ತದೆ ಎಂದಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರನ್ನು ಅಪ್ಪಟ ಚಿನ್ನ ಎಂದು ಘೋಷಿಸಿದೆ. ಮುನಿರತ್ನ ಅವರ ಮೇಲಿದ್ದ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಆರೋಪಗಳು ಈ ಗೆಲುವಿನೊಂದಿಗೆ ಮೂಲೆ ಸೇರಿದೆ. ಕಾಂಗ್ರೆಸ್ ಕೂಡ ಮುಜುಗರದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದೆ. ಮೈತ್ರಿ ಸರಕಾರದ ಪಾಲಿಗೆ ಒಂದೊಂದು ಸ್ಥಾನವೂ ಅಳಿವು ಉಳಿವಿನ ಪ್ರಶ್ನೆ. ಈ ನಿಟ್ಟಿನಲ್ಲಿ ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಅತ್ಯಗತ್ಯವಾಗಿತ್ತು. ವಿಧಾನಸಭೆಯಲ್ಲಿ ಮೈತ್ರಿಯನ್ನು ಘೋಷಿಸಿದ ಜೆಡಿಎಸ್-ಕಾಂಗ್ರೆಸ್‌ಗೆ ರಾಜರಾಜೇಶ್ವರಿ ನಗರದ ಚುನಾವಣೆಯಲ್ಲಿ ಆ ಮೈತ್ರಿಯನ್ನು ಉಳಿಸಿ ಜೊತೆಯಾಗಿ ಹೋರಾಡಲು ಸಾಧ್ಯವಾಗಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಒಂದೆಡೆ ಮುನಿರತ್ನ ಮೇಲಿರುವ ಆರೋಪ ಹಾಗೂ ಇನ್ನೊಂದೆಡೆ ಜಾತ್ಯತೀತ ಮತಗಳ ಧ್ರುವೀಕರಣ, ಕಾಂಗ್ರೆಸ್‌ನ ಮೇಲೆ ದುಷ್ಪರಿಣಾಮ ಬೀರುತ್ತದೆಯೋ ಎನ್ನುವ ಅನುಮಾನವಿತ್ತು.

ಆದರೆ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವಂತೆ ಮುನಿರತ್ನ ಅವರು ಭಾರೀ ಮತಗಳ ಅಂತರದಿಂದ ಗೆದ್ದಿದ್ದಾರೆ. ತನ್ನ ಮೇಲಿರುವ ಆರೋಪಗಳಿಗೆ ಅವರು ನೀಡಿರುವ ಉತ್ತರ ಇದಾಗಿದೆ. ಜೊತೆಗೆ ಮೈತ್ರಿ ಸರಕಾರಕ್ಕೂ ಇನ್ನಷ್ಟು ಬಲಬಂದಂತಾಗಿದೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. 2019ರ ಮಹಾಚುನಾವಣೆಗೆ ಈ ಉಪಚುನಾವಣೆಯ ಫಲಿತಾಂಶ ದಿಕ್ಸೂಚಿಯೆಂದು ಈಗಾಗಲೇ ರಾಜಕೀಯ ಪಂಡಿತರು ವಿಶ್ಲೇಷಿಸತೊಡಗಿದ್ದಾರೆ. ಕೈರಾನಾ ಬಿಜೆಪಿಯ ಪಾಲಿಗೆ ಪ್ರತಿಷ್ಠೆಯ ಲೋಕಸಭಾ ಕ್ಷೇತ್ರವಾಗಿತ್ತು. ಈಗಾಗಲೇ ಗೋರಖ್‌ಪುರ ಮತ್ತು ಫೂಲ್‌ಪುರ ಲೋಕಸಭಾ ಕ್ಷೇತ್ರಗಳಲ್ಲಿ ಮುಖಭಂಗ ಅನುಭವಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಕೈರಾನಾ ತನ್ನ ಮುಖ ಉಳಿಸಿಕೊಳ್ಳಲು ಸಿಕ್ಕಿದ ಕೊನೆಯ ಅವಕಾಶವಾಗಿತ್ತು. ಬಿಜೆಪಿಯ ಸಂಸದ ಹುಕುಂ ಸಿಂಗ್ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಕೋಮುದ್ವೇಷವನ್ನು ಬಿಜೆಪಿ ಹರಡಿತ್ತು. ಇಲ್ಲಿರುವ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯಾಗಿತ್ತು. ಮುಸ್ಲಿಮರಿಗೆ ಹೆದರಿ ಹಿಂದೂಗಳು ಕೈರಾನಾದಿಂದ ವಲಸೆಹೋಗುತ್ತಿದ್ದಾರೆ ಎಂಬ ವದಂತಿಗಳನ್ನು ಹಬ್ಬಿಸಿದ್ದಷ್ಟೇ ಅಲ್ಲ, ಅಲ್ಲಲ್ಲಿ ಗಲಭೆ ಎಬ್ಬಿಸಿ, ಜನರನ್ನು ಧಾರ್ಮಿಕವಾಗಿ ಒಡೆಯಲು ಯಶಸ್ವಿಯಾಗಿತ್ತು.

ಈ ಮೂಲಕ ಸ್ಥಳೀಯ ಜಾಟ್ ಸಮುದಾಯದ ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಪೂರ್ಣವಾಗಿ ತನ್ನದಾಗಿಸಿಕೊಂಡಿತ್ತು. ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ದೊರಕಿದ ಒಟ್ಟು ಮತಗಳನ್ನು ಕೂಡಿಸಿದರೂ ಕೈರಾನಾ ಗೆಲುವು ಕಳೆದ ಲೋಕಸಭೆಯ ಚುನಾವಣೆಯಲ್ಲಿ ಅಸಾಧ್ಯವಾಗಿತ್ತು. ಆದರೆ ಅದೇ ಕೈರಾನಾದಲ್ಲಿ ಜಾಟ್ ಸಮುದಾಯದ ಬೆಂಬಲದೊಂದಿಗೆ ಈ ಬಾರಿ ತಬುಸ್ಸಮ್ ಎಂಬ ಮುಸ್ಲಿಮ್ ಅಭ್ಯರ್ಥಿ ಗೆದ್ದಿದ್ದಾರೆ. ಆದಿತ್ಯನಾಥ್ ಅವರ ಕೇಸರೀಕರಣದ ರಾಜಕೀಯಕ್ಕೆ ಕೊಟ್ಟ ಭಾರೀ ತಪರಾಕಿ ಇದು. ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ, ಹಿಂದುತ್ವವನ್ನು ಪೂರ್ಣ ಪ್ರಮಾಣದಲ್ಲಿ ಎತ್ತಿ ಹಿಡಿದು ಚುನಾವಣೆ ಎದುರಿಸಿದ್ದ ಬಿಜೆಪಿಗೆ ಜಾತ್ಯತೀತ ಶಕ್ತಿಗಳು ಕೊಟ್ಟ ಮಾರ್ಮಿಕ ಉತ್ತರವಾಗಿದೆ. ಹಾಗೆಯೇ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ತಮ್ಮ ಪ್ರತಿಷ್ಠೆಗಳನ್ನು ಬದಿಗಿಟ್ಟರೆ ಮಾತ್ರ ಕೇಸರಿ ರಾಜಕಾರಣವನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎನ್ನುವುದನ್ನು ಈ ಚುನಾವಣೆ ತಿಳಿಸಿಕೊಟ್ಟಿದೆ.

ತನ್ನ ಆಡಳಿತದ ವೈಫಲ್ಯವನ್ನು ಮರೆಸಲು ಕಂಡಕಂಡ ಗೋಡೆಗಳಿಗೆ ಕೇಸರಿ ಬಳಿದು ಜನರನ್ನು ಮಂಕು ಮರುಳು ಮಾಡಲು ಯತ್ನಿಸಿದ ಆದಿತ್ಯನಾಥ್ ಅವರ ತಂತ್ರ ಸಂಪೂರ್ಣ ಕೈಕೊಟ್ಟಿರುವುದಕ್ಕೂ ಈ ಫಲಿತಾಂಶ ಸಾಕ್ಷಿಯಾಗಿದೆ. ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಜಾತ್ಯತೀತ ಪಕ್ಷಗಳು ಮುಂದಿನ ದಿನಗಳಲ್ಲಿ ಒಂದಾಗಿ ನಿಂತು ಬಿಜೆಪಿಯನ್ನು ಎದುರಿಸಿದರೆ ಖಂಡಿತವಾಗಿಯೂ ಮೋದಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎನ್ನುವ ಸಂದೇಶ ಕೈರಾನಾದಿಂದ ಸ್ಪಷ್ಟವಾಗಿ ಸಿಕ್ಕಿದೆ. ಹಾಗೆಯೇ ಕಾಂಗ್ರೆಸ್ ಬೆಂಬಲಿತ ಎನ್‌ಸಿಪಿಯು ಭಂಡಾರ-ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಈ ಕ್ಷೇತ್ರವೂ ಬಿಜೆಪಿಯ ಹಿಡಿತದಲ್ಲಿತ್ತು ಎನ್ನುವುದು ಗಮನಾರ್ಹ.

 ಹಿಂದೆ, ಇಂದಿರಾಗಾಂಧಿಯ ಆಡಳಿತ ಕಾಲದಲ್ಲಿ ಅವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಎಲ್ಲ ಸಣ್ಣ ಪುಟ್ಟ ಪಕ್ಷಗಳು ಒಂದಾಗಿ ಕಾಂಗ್ರೆಸ್ ಮೇಲೆ ಬಿತ್ತು. ಅದಾಗಷ್ಟೇ ತುರ್ತು ಪರಿಸ್ಥಿತಿಯಿಂದ ಹೊರಬಂದಿದ್ದ ದೇಶ, ಈ ಮೈತ್ರಿಯನ್ನು ಒಪ್ಪಿಕೊಳ್ಳುವ ಮಟ್ಟಿಗೆ ತನ್ನ ಮನಸ್ಥಿತಿಯನ್ನು ಬದಲಿಸಿಕೊಂಡಿತ್ತು. ಮೈತ್ರಿ ಸರಕಾರ ಅಧಿಕಾರ ಹಿಡಿಯಲು ಯಶಸ್ವಿಯೂ ಆಯಿತು. ಹಾಗೆ ನೋಡಿದರೆ ಇಂದಿರಾಗಾಂಧಿಗೆ ಈ ದೇಶದ ತಳಸ್ತರದ ಜನರ ಬೆಂಬಲವಿತ್ತು. ಬಡವರು, ದಲಿತರು, ಶೋಷಿತ ಸಮುದಾಯದ ಜನರು ಇಂದಿರಾಗಾಂಧಿಯನ್ನು ಆರಾಧಿಸುತ್ತಿದ್ದ ಕಾಲ ಅದು.. ನರೇಂದ್ರ ಮೋದಿಗೆ ಇಂದಿರಾಗಾಂಧಿಗಿರುವ ಯಾವ ವರ್ಚಸ್ಸೂ ಇಲ್ಲ. ಬರೀ ಸುಳ್ಳುಗಳ ತಳಹದಿಯ ಮೇಲೆ ಅವರು ನಿಂತಿದ್ದಾರೆ. ಹಿಂದುತ್ವವೆನ್ನುವ ಗುಳ್ಳೆಯನ್ನೇರಿ ಅವರಿಂದು ಪ್ರಧಾನಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ.

ಈ ಗುಳ್ಳೆ ಒಡೆಯಲು ಹೆಚ್ಚು ದಿನ ಬೇಡ. ಕಳೆದ ನಾಲ್ಕು ವರ್ಷಗಳಲ್ಲಿ ಜನಪರ ಆಡಳಿತ ನೀಡಲು ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ಇಂದು ಅಘೋಷಿತವಾಗಿ ದೇಶದ ಮೇಲೆ ಹೇರಲಾಗಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ನೋಟು ನಿಷೇಧದ ದುಷ್ಪರಿಣಾಮದಿಂದ ಜನರು ಇನ್ನೂ ತಲೆಯೆತ್ತಿಲ್ಲ. ಯುವಕರಿಗೆ ಉದ್ಯೋಗ ನೀಡಲು ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಸಂದರ್ಭದಲ್ಲಿ ಜಾತ್ಯತೀತ ಮತಗಳು ವಿಭಜನೆಯಾಗದಂತೆ ಎಲ್ಲ ಜಾತ್ಯತೀತ ಪಕ್ಷಗಳು ಒಂದಾಗಿ ನಿಂತರೆ ನರೇಂದ್ರ ಮೋದಿಯನ್ನು ಸೋಲಿಸುವುದು ಕಷ್ಟವೇನೂ ಅಲ್ಲ. ಈ ನಿಟ್ಟಿನಲ್ಲಿ ಉಪಚುನಾವಣೆಯ ಫಲಿತಾಂಶವನ್ನು ಜಾತ್ಯತೀತ ಪಕ್ಷಗಳು ಸ್ವೀಕರಿಸಬೇಕಾಗಿದೆ.

ಹಾಗೆಯೇ, ಉಪಚುನಾವಣೆಯ ಫಲಿತಾಂಶವನ್ನು ಪೂರ್ಣವಾಗಿ ನಂಬಿ ಇವಿಎಂ ವಿರುದ್ಧದ ಹೋರಾಟದಿಂದ ಬಿಜೆಪಿಯೇತರ ಪಕ್ಷಗಳು ಹಿಂದೆ ಸರಿಯಬಾರದು. ಇವಿಎಂ ವಿರುದ್ಧ ಕೆಲವು ವರ್ಷಗಳ ಹಿಂದೆ ಬಿಎಸ್ಪಿ ದೊಡ್ಡ ದನಿಯಲ್ಲಿ ಮಾತನಾಡಿತ್ತು. ಇಂದು ಅಷ್ಟೇ ದೊಡ್ಡ ದನಿಯಲ್ಲಿ ಅದರ ವಿರುದ್ಧ ಮಾತನಾಡುತ್ತಿರುವುದು ಬಿಜೆಪಿಯ ಮಿತ್ರ ಪಕ್ಷವಾಗಿರುವ ಶಿವಸೇನೆ ಮಾತ್ರ. ಉಪಚುನಾವಣೆಯ ಫಲಿತಾಂಶ, ಇವಿಎಂ ವಿರುದ್ಧ ಮಾತನಾಡುತ್ತಿರುವ ಪಕ್ಷಗಳಿಗೆ ನೀಡಿರುವ ಸಣ್ಣ ಸಾಂತ್ವನವಾಗಿರಬಹುದು. ಇದನ್ನು ನಂಬಿ ಇವಿಎಂ ಮೇಲೆ ಪೂರ್ಣ ವಿಶ್ವಾಸವಿಟ್ಟು 2019ರ ಚುನಾವಣೆಯನ್ನು ಎದುರಿಸಲು ಹೊರಟರೆ 2014ರ ಫಲಿತಾಂಶವನ್ನೇ ಎದುರು ನೋಡಬೇಕಾಗಬಹುದು. ಈ ನಿಟ್ಟಿನಲ್ಲಿ ಮಿತ್ರ ಪಕ್ಷಗಳೆಲ್ಲ ಒಂದಾಗಿ ಮೊದಲು ಇವಿಎಂ ವಿರುದ್ಧ ಆಂದೋಲನ ಶುರು ಮಾಡಬೇಕಾಗಿದೆ. ಇವಿಎಂ ವಿರುದ್ಧದ ಆಂದೋಲನದಲ್ಲಿ ತನ್ನದಾಗಿಸಿಕೊಳ್ಳುವ ಗೆಲುವು 2019ರ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News