ಕುಮಾರಸ್ವಾಮಿಗೆ ಶಿಕ್ಷಕರ ಸಮಸ್ಯೆ ಬಗೆಹರಿಸುವ ತಾಕತ್ತು ಇದೆ: ಹೆಚ್.ಡಿ.ದೇವೇಗೌಡ

Update: 2018-06-02 12:22 GMT

ತುಮಕೂರು,ಜೂ.02: ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಗೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ತಾಕತ್ತು ಇದೆ. ಆದ್ದರಿಂದ ಜೂನ್ 08 ರಂದು ನಡೆಯುವ ವಿಧಾನಪರಿಷತ್ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಶಿಕ್ಷಕ ಭಾಂದವರು ಮತ ನೀಡುವಂತೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದ ಕೊಲ್ಲಾಪುರದ ಸಮುದಾಯ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಏರ್ಪಡಿಸಿದ್ದ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಸಮ್ಮಿಶ್ರ ಸರಕಾರದಲ್ಲಿ ನಿಮ್ಮೆಲ್ಲರ ಸಮಸ್ಯೆಗಳನ್ನು ಚೆನ್ನಾಗಿ ಆರಿತಿರುವ ಬಸವರಾಜ ಹೊರಟ್ಟಿ ಅವರೇ ಶಿಕ್ಷಣ ಮಂತ್ರಿಗಳಾಗುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಜೂನ್ 08ರಂದು ನಡೆಯುವ ತಲಾ ಮೂರು ಶಿಕ್ಷಕ ಮತ್ತು ಪದವಿಧರರ ಕ್ಷೇತ್ರದ ಚುನಾವಣೆಗೆ ಬೇರೆ ಪಕ್ಷಗಳಿಂದಲೂ ಪ್ರಬಲ ಸ್ಪರ್ಧಿಗಳಿದ್ದಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು, ಶಾಸಕರು, ಇನ್ನಿತರ ಜನಪ್ರತಿನಿಧಿಗಳು ಪಕ್ಷದ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಪ್ರಚಾರ ಕೈಗೊಂಡು ರಮೇಶ್‍ಬಾಬು ಸೇರಿದಂತೆ ಎಲ್ಲಾ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನ ನಡೆಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಕರೆ ನೀಡಿದರು.

ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಈ ಹಿಂದೆ 206ರ 20 ತಿಂಗಳ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರಕಾರದಲ್ಲಿ ಶಿಕ್ಷಕರ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. 1000 ಅಧಿಕ ಹೈಸ್ಕೂಲ್, 500 ಪಿ.ಯು ಕಾಲೇಜು ಮತ್ತು 100ಕ್ಕೂ ಅಧಿಕ ಪದವಿ ಕಾಲೇಜುಗಳನ್ನು ಮಂಜೂರು ಮಾಡಿ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಆದರೆ ಆ ನಂತರದಲ್ಲಿ ಬಂದ ಸರಕಾರಗಳು ಈ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡದ ಕಾರಣ ವ್ಯವಸ್ಥೆಯಲ್ಲಿ ಲೋಪದೋಷ ತಾಂಡವವಾಡುತ್ತಿದ್ದು, ನಮ್ಮ ಸರಕಾರದಲ್ಲಿ ಶಿಕ್ಷಣ ವ್ಯವಸ್ಥೆಗೆ ಸಮಗ್ರ ಬದಲಾವಣೆ ತರಲಾಗುವುದು. ಮುಂದಿನ ಐದು ವರ್ಷದಲ್ಲಿ ಈ ಕ್ಷೇತ್ರವನ್ನು ಸಮಸ್ಯೆ ಮುಕ್ತ ಕ್ಷೇತ್ರವಾಗಿಸಲು ಹೆಚ್.ಡಿ.ಕುಮಾರಸ್ವಾಮಿ, ನಾವು ಜೊತೆಗೂಡಿ ಶ್ರಮಿಸಲಿದ್ದೇವೆ. ನಿಮ್ಮ ಪ್ರತಿನಿಧಿಯಾಗಿ ಅನುಭವಿಗಳು, ತಾಳ್ಮೆಯ ಪ್ರತಿರೂಪವಾಗಿರುವ ರಮೇಶ್‍ಬಾಬು ಆಯ್ಕೆ ಮಾಡಿ ಕಳುಹಿಸಿದರೆ, ಈ ಕೆಲಸ ಮತ್ತಷ್ಟು ವೇಗಪಡೆಯಲಿದೆ ಎಂಬ ಭರವಸೆಯನ್ನು ನೀಡಿದರು.

ಬಿಜೆಪಿ ಅಭ್ಯರ್ಥಿಯಾಗಿರುವ ವೈ.ಎನ್.ನಾರಾಯಣಸ್ವಾಮಿ ಅವರು ಅವಕಾಶವಾದಿ ರಾಜಕಾರಣಿ. ಇದನ್ನು ಅರಿತ ಸಾಮಾನ್ಯ ಕ್ಷೇತ್ರದ ಜನತೆ ಅವರನ್ನು ಮನೆಗೆ ಕಳುಹಿಸಿದ್ದಾರೆ.  ಹಣ, ಇನ್ನಿತರ ಅಮೀಷಗಳಿಗೆ ಬಲಿಯಾಗದೆ, ಶಿಕ್ಷಕರ ಘನತೆ ಉಳಿಯವಂತಹ ಕೆಲಸ ಮಾಡಿ, ರಮೇಶ್ ಬಾಬು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಹೊರಟ್ಟಿ ಮನವಿ ಮಾಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಮೇಶ್‍ಬಾಬು ಮಾತನಾಡಿ, ಕಳೆದ ಒಂದು ವರ್ಷ ಮೂರು ತಿಂಗಳಲ್ಲಿ ಶಿಕ್ಷಕರ ಹಲವು ಸಮಸ್ಯೆಗಳನ್ನು ಬಗೆಹರಿಸಲು ನಾನು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಕಾಲ್ಪನಿಕ ಬಡ್ತಿಗೆ ಮತ್ತು ಭತ್ಯೆಗೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ನೀಡಿದ ವರದಿ ರಾಜ್ಯ ಸರಕಾರದ ಮುಂದಿದ್ದು, ಕೂಡಲೇ ಒಪ್ಪಿಗೆ ಸೂಚಿಸಿ, ಪರಿಹಾರ ದೊರೆಯುವಂತೆ ಮಾಡಲಾಗುವುದು. ಶಿಕ್ಷಕ ಬಂಧುಗಳು ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆಯಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ, ಬೆಮಲ್ ಕಾಂತರಾಜು, ವೆಂಕಟರಾಮ್ ನಾಡಗೌಡ ಮಾತನಾಡಿದರು. ಶಾಸಕರಾದ ಎಸ್.ಆರ್.ಶ್ರೀನಿವಾಸ್, ಬಿ.ಸತ್ಯನಾರಾಯಣ, ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಕೆ.ಎಂ.ತಿಮ್ಮರಾಯಪ್ಪ, ಮುಖಂಡರಾದ ಗೋವಿಂದರಾಜು, ಲೋಕೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News