ರೈತರ ಎಲ್ಲ ಬಗೆಯ ಸಾಲ ಮನ್ನವಾಗಲಿ: ಕುರುಬೂರು ಶಾಂತಕುಮಾರ್

Update: 2018-06-02 14:24 GMT

ಬೆಂಗಳೂರು, ಜೂ.2: ರಾಷ್ಟ್ರೀಕೃತ, ಸಹಕಾರಿ, ಖಾಸಗಿ ಬ್ಯಾಂಕ್, ಗಿರವಿ ಅಂಗಡಿಗಳು ಸೇರಿದಂತೆ ರೈತರು ಮಾಡಿರುವ ಎಲ್ಲ ಬಗೆಯ ಸಾಲವನ್ನು ಮನ್ನಾ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಪ್ರಕಟಿಸಿರುವ ಸಾಲ ಮನ್ನಾ ಯೋಜನೆಯಲ್ಲಿ ಹಲವಾರು ತಿದ್ದುಪಡಿಗಳು ಆಗಬೇಕಾಗಿದೆ. ಬೆಳೆ ಸಾಲ ಮನ್ನಾ ಅವಧಿಯನ್ನು 2009 ರಿಂದ 2017ರ ತನಕ ನಿಗದಿಗೊಳಿಸಿರುವುದರಿಂದ ಹೆಚ್ಚು ರೈತರು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ. ಹೀಗಾಗಿ 2018ರವರೆಗೆ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತರು ಭೂಮಿ ದಾಖಲೆ ಇಲ್ಲದೆ, ಚಿನ್ನವನ್ನು ಗಿರವಿ ಇಟ್ಟು ಪಹಣಿ ಪತ್ರ ನೀಡಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ರೈತರು ಬೆಳೆ ಸಾಲ ಮಾಡಿ ಮರುಪಾವತಿ ಮಾಡಲು ಸಾಧ್ಯವಾಗದೆ ನ್ಯಾಯಾಲಯಗಳಲ್ಲಿ ದಾವೆ ಹೂಡಿರುವ ಪ್ರಕರಣಗಳಿಗೂ ಸಾಲ ಮನ್ನಾ ಮಾಡಬೇಕು. ರಾಜ್ಯದ ರೈತರು ಬೆಳೆ ಸಾಲವನ್ನು ಬಹುರಾಷ್ಟ್ರೀಯ ಬ್ಯಾಂಕ್‌ಗಳಾದ ಎಚ್ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ಗಳಿಂದ ಪಡೆದಿರುತ್ತಾರೆ ಈ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಳ್ಳಿಯ ರೈತರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಸಹ ಸಾಲ ಪಡೆದಿದ್ದಾರೆ. ಇಂತಹ ರೈತರಿಗೆ ಬೆಳೆ ಸಾಲ ಮನ್ನಾ ಮಾಡಬೇಕು. ಬಯಲು ಸೀಮೆಯ ರೈತರಿಗೆ ಬೆಳೆ ಸಾಲ ಹೆಚ್ಚು ದೊರಕಿಲ್ಲ. ಆದ್ದರಿಂದ ಈ ಭಾಗದಲ್ಲಿ ಕೊಳವೆಬಾವಿ ಸಾಲ ಪಡೆದು ಈ ಹಣವನ್ನು ಬೆಳೆ ಬೆಳೆಯಲು ಕೃಷಿಗೆ ಬಳಸಿಕೊಂಡಿದ್ದಾರೆ. ಈ ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸದೇ ಎಲ್ಲ ರೈತರಿಗೆ ಯೋಜನೆ ಲಭಿಸುವಂತಾಗಬೇಕು ಎಂದು ಕುರುಬೂರು ಶಾಂತಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News