×
Ad

ಸಮ್ಮಿಶ್ರ ಸರಕಾರದ ‘ಕೊಡು-ತೆಗೆದುಕೊ’ ನೀತಿ ಸ್ವಾಗತಾರ್ಹ: ಎ.ಕೆ. ಸುಬ್ಬಯ್ಯ

Update: 2018-06-02 23:23 IST

ಪೊನ್ನಂಪೇಟೆ,ಜೂ.02: ಕೋಮುವಾದಿ ಪ್ಯಾಸಿಸ್ಟ್ ಶಕ್ತಿಯಾದ ಬಿ.ಜೆ.ಪಿ.ಯನ್ನು ಅಧಿಕಾರದಿಂದ ದೂರವಿಟ್ಟು ಜಾತ್ಯತೀತ ಶಕ್ತಿಗಳು ಜೊತೆಸೇರಿ ರಾಜ್ಯಾಂಗ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕೆಂದು, ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳು ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸಿರುವುದು ಜನಾದೇಶಕ್ಕೆ ದೊರೆತ ಗೌರವ ಮತ್ತು ಮನ್ನಣೆಯಾಗಿದೆ ಎಂದು ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರು ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೀಗ ಖಾತೆ ಹಂಚಿಕೆ ಪ್ರಕ್ರಿಯೆ ಕೂಡ ‘ಕೊಡು- ತೆಗೆದುಕೊ’ ನೀತಿಯ ಆಧಾರದ ಮೇಲೆ ಸೌಹಾರ್ದಯುತವಾಗಿ ನಡೆದು ಅಂತಿಮಗೊಂಡಿರುವುದು ನೂತನ ಸರಕಾರದ ಯಶಸ್ವಿ ಆಡಳಿತಕ್ಕೆ ಮುನ್ನುಡಿಯಂತಿದೆ. ಇನ್ನು ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೋರಿಸುತ್ತಿರುವ ಬದ್ಧತೆ ಮತ್ತು ಪ್ರೌಡಿಮೆ ಮೆಚ್ಚುವಂತದ್ದು. ವಿಶೇಷವಾಗಿ ನಾಡಿನ ಕೋಮು ಸೌಹಾರ್ದತೆ ಕಾಪಾಡಲು ಸದಾ ಬದ್ದರಾಗಿರಬೇಕೆಂದು ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳು ನೀಡಿದ ನಿರ್ದೇಶನ ಅವರೊಬ್ಬ ಯಶಸ್ವಿ ಆಡಳಿತಗಾರರಾಗುತ್ತಾರೆ ಎಂಬುದರ ಸೂಚನೆಯಂತಿದೆ ಎಂದು ಶ್ಲಾಘಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತನ್ನಲ್ಲಿ ತಾನು ವಿಶ್ವಾಸ ಬೆಳೆಸಿಕೊಂಡು ಸ್ವಂತ ಸಾಮರ್ಥ್ಯದ ಮೇಲೆ ಅವಲಂಬಿತರಾಗಿ ಆಡಳಿತ ನಡೆಸುವುದರ ಮೂಲಕ ಸಮ್ಮಿಶ್ರ ಸರಕಾರದ ಮೇಲೆ ಜನತೆ ಇಟ್ಟಿರುವ ಭರವಸೆಯನ್ನು ಈಡೇರಿಸುತ್ತಾ ನಮ್ಮ ರಾಜ್ಯಾಂಗ ಮತ್ತು ಪ್ರಜಾಪ್ರಭುತ್ವವನ್ನು ಸಂರಕ್ಷಿಸಬೇಕೆಂಬುದೇ ಈ ಸಂದರ್ಭದಲ್ಲಿ ನನ್ನಂಥವರ ಆಶಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News