‘ಮೈತ್ರಿ’ ಲಿವಿಂಗ್ ಟುಗೇದರ್ ಸಂಬಂಧ: ಸಿ.ಟಿ.ರವಿ

Update: 2018-06-03 11:51 GMT

ಕಲಬುರಗಿ, ಜೂ. 3: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ್ದು ಒಂದು ರೀತಿಯಲ್ಲಿ ಇದು ಲವ್ ಮ್ಯಾರೇಜ್ ಅಲ್ಲ, ಅರೆಂಜ್ ಮ್ಯಾರೇಜ್ ಕೂಡ ಅಲ್ಲ. ಇದೊಂದು ‘ಲಿವಿಂಗ್ ಟುಗೇದರ್’ ಸಂಬಂಧ ಎಂದು ಮಾಜಿ ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಸರಕಾರ ಹಸಿದವರು ಮತ್ತು ಹಳಸಿದವರ ಸಂಬಂಧ. ಮೈತ್ರಿಕೂಟ ಸರಕಾರ ರಾಜ್ಯದ ಜನರ ಸಂಕಷ್ಟ ಬಗೆಹರಿಯಲು ಸಾಧ್ಯವೇ ಇಲ್ಲ. ಇದು ಪವಿತ್ರವಾದ ಮದುವೆಯೂ ಅಲ್ಲ ಎಂದು ಟೀಕಿಸಿದರು.

ಯಾವುದೇ ಮದುವೆ ಮಾಡಬೇಕಾದರೆ ಗುಣ-ಜಾತಕ ನೋಡುತ್ತಾರೆ. ಒಂದು ವೇಳೆ ಹತ್ತುಗುಣ ಹೊಂದಾಣಿಕೆಯಾದ್ರೆ ಮಾತ್ರ ಮದುವೆ ಮಾಡುತ್ತಾರೆ. ಆದರೆ ಇಲ್ಲಿ ಯಾವುದೇ ಜಾತಕ ನೋಡದೇ ಮಾಡಿಸಿದ ಸಂಬಂಧ ಎಂದ ಅವರು, ಹಳಸಿದವರು ಜೆಡಿಎಸ್‌ನವರು, ಹಸಿದವರು ಕಾಂಗ್ರೆಸ್‌ನವರು ಇಬ್ಬರು ಸೇರಿ ಸರಕಾರ ರಚನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಮೈತ್ರಿ ಸರಕಾರ ಇನ್ನೂ ಎಷ್ಟು ದಿನ ಇರುತ್ತೆ ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಇವರು ‘ಲಿವೀಂಗ್ ಟುಗೇದರ್’ ಮಾಡಿಕೊಂಡಿದ್ದಾರೆ. ಸಂಪುಟ ರಚನೆಗೆ ಮೊದಲೇ ಆಂತರೀಕ ಬೇಗುದಿ ಭುಗಿಲೆದ್ದಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News