ಚಿಕ್ಕಮಗಳೂರು: ಸೊಳ್ಳೆಗಳ ಉತ್ಪತ್ತಿ ತಾಣವಾದ ನಗರಸಭೆ ಉದ್ಯಾನವನ

Update: 2018-06-03 12:54 GMT

ಚಿಕ್ಕಮಗಳೂರು, ಜೂ.3: ನಗರದ ಹೃದಯ ಭಾಗದಲ್ಲಿರುವ ನಗರಸಭೆ ಉದ್ಯಾನವನ ಇಲ್ಲಿನ ನಿವಾಸಿಗಳ ವಿಹಾರಕ್ಕಿರುವ ಏಕಮಾತ್ರ ಪಾರ್ಕ್ ಆಗಿದ್ದು, ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರರ ನಿರ್ಲಕ್ಷ್ಯದಿಂದಾಗಿ ಉದ್ಯಾನವನ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪ ನಾಗರಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಉದ್ಯಾನವನದ ಮಧ್ಯೆಯೇ ಇರುವ ನಗರಸಭೆ ಕಚೇರಿಗೆ ಹೊಂದಿಕೊಂಡಂತಿರುವ ಖಾಲಿ ಜಾಗದಲ್ಲಿ ಬಿದ್ದಿರುವ 20ಕ್ಕೂ ಹೆಚ್ಚು ಕಸ ವಿಲೇವಾರಿ ಮಾಡುವ ಕಂಟೈನರ್ ಗಳು ನಾಗರಿಕರ ಈ ಆರೋಪಕ್ಕೆ ಕಾರಣವಾಗಿವೆ. ಸುಮಾರು 10 ವರ್ಷಗಳಿಂದ ನಗರಸಭೆ ಕಚೇರಿ ಪಕ್ಕದಲ್ಲಿಯೇ ತುಕ್ಕು ಹಿಡಿದು ಉಪಯೋಗಕ್ಕೆ ಬಾರದ ಕಸ ವಿಲೇವಾರಿ ಕಂಟೈನರ್ ಗಳು ಅನಾಥ ಶವಗಳಂತೆ ಬಿದ್ದಿವೆ. ಉಪಯೋಗಕ್ಕೆ ಬಾರದ ಈ ಕಸ ವಿಲೇವಾರಿ ಕಂಟೈನರ್ ಗಳನ್ನು ನಗರಸಭೆ ಆವರಣದಿಂದ ವಿಲೇವಾರಿ ಮಾಡಲು ಅಧಿಕಾರಿಗಳು ಹಾಗೂ ಸದಸ್ಯರಿಗೆ ಇನ್ನೂ ಕಾಲ ಕೂಡಿ ಬಾರದಂತಾಗಿರುವುದು ವಿಪರ್ಯಾಸ.

ಖಾಲಿ ಬಿದ್ದಿರುವ ಕಸವಿಲೇವಾರಿ ಕಂಟೈನರ್ ಗಳು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದ್ದರೂ ನಗರಸಭೆ ಕಚೇರಿಯ ಕಸವನ್ನು ಹಾಕಲು ಉಪಯೋಗಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು, ನಗರಸಭೆ ಸಿಬ್ಬಂದಿ ಹರಿದ ಕಾಗದಗಳು, ಕಾಫಿ ಟೀ ಕುಡಿದು ಎಸೆದ ಪೇಪರ್ ಲೋಟಗಳನ್ನು ತಂದು ಹಾಕುತ್ತಿದ್ದಾರೆ. ಅಲ್ಲದೇ ಮಳೆಯ ನೀರು ಈ ಕಂಟೈನರ್ ಗಳಲ್ಲಿ ತುಂಬಿಕೊಳ್ಳುತಿರುವುದರಿಂದ ಈ ಕಂಟೈನರ್ ಗಳು ಸೊಳ್ಳೆಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿವೆ. ಕಂಟೈನರ್ ಗಳಲ್ಲಿನ ತ್ಯಾಜ್ಯವಸ್ತು ಹಾಗೂ ಮಳೆಯ ನೀರಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಇಡೀ ನಗರಸಭೆ ಉದ್ಯಾನವನದಲ್ಲಿ ಸಂಜೆಯ ಹೊತ್ತಿನಲ್ಲಿ ವಾಯುವಿಹಾರಕ್ಕೆ ಬರುವ ಸಾರ್ವಜನಿಕರನ್ನು ಕಾಡುತ್ತಿವೆ. ಡೆಂಗ್‍ನಂತಹ ಮಾರಕ ರೋಗಗಳನ್ನು ಈ ಸೊಳ್ಳೆಗಳು ಹರಡುತ್ತಿವೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ನಗರಸಭೆ ಉದ್ಯಾನವನ ಹಾಗೂ ಕಚೇರಿಯ ಅಂದಕ್ಕೆ, ಸ್ವಚ್ಛತೆಗೆ ಮಾರಕವಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇವಾರಿ ಕಂಟೈನರ್ ಗಳನ್ನು ಇಲ್ಲಿಂದ ವಿಲೇವಾರಿ ಮಾಡಿ ಸ್ವಚ್ಛತೆ ಕಾಯ್ದುಕೊಳ್ಳುವ ಸಲುವಾಗಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುವುದು ನಾಗರಿಕರ ದೂರಾಗಿದ್ದು, ಸುಮಾರು 10 ವರ್ಷಗಳಿಂದ ತ್ಯಾಜ್ಯವಿಲೇವಾರಿ ಕಂಟೈನರ್ ಗಳು ಆವರಣದಲ್ಲಿ ಅನಾಥವಾಗಿ ಬಿದ್ದಿವೆ. ಅವುಗಳು ತುಕ್ಕು ಹಿಡಿದು ತೂತು ಬಿದ್ದಿರುವುದರಿಂದ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಅವುಗಳನ್ನು ಗುಜರಿಗಾದರೂ ಹಾಕಬಹುದು. ಇದರಿಂದ ನಗರಸಭೆಗೆ ಆದಾಯ ಬರುತ್ತದೆ. ಕಚೇರಿ ಆವರಣದಲ್ಲಿ ಸ್ವಚ್ಛತೆ ಇರುತ್ತದೆ. ಜಾಗವೂ ಮುಕ್ತವಾಗುತ್ತದೆ ಎಂಬುದು ಉದ್ಯಾನವನಕ್ಕೆ ಬರುವ ವಾಯುವಿಹಾರಿಗಳ ಅಭಿಪ್ರಯಾವಾಗಿದೆ.

ಇನ್ನು ನಗರಸಭೆ ಆಯುಕ್ತರ ಕಚೇರಿ ಎದುರಿಗಿರುವ ಖಾಲಿ ಜಾಗದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಹೊಸದಾಗಿ ನಿರ್ಮಿಸಲಾದ ಪಾರ್ಕ್ ಕೂಡ ಇತ್ತೀಚೆಗೆ ತನ್ನ ಅಂಧವನ್ನು ಕಳೆದುಕೊಳ್ಳುತ್ತಿದೆ. ಪಾರ್ಕ್‍ನಲ್ಲಿ ನಿರ್ಮಿಸಲಾಗಿದ್ದ ಹಸು, ಮೇಕೆ ಮತ್ತಿತರ ಕೃತಕ ಸಿಮೆಂಟ್ ಮೂರ್ತಿಗಳ ಭಾಗಗಳು ಮುರಿದು ಹೋಗಿವೆ. ಹೂವು ಹಾಗೂ ಅಲಂಕಾರಿಕ ಗಿಡಗಳು ನೀರಿಲ್ಲದೇ ಒಣಗುತ್ತಿವೆ. ನಗರಸಭೆ ಉದ್ಯಾನವನದ ಆಕರ್ಷಣೆಯಾದ ಇವುಗಳನ್ನು ಸಿಬ್ಬಂದಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಇವುಗಳ ನಿರ್ವಹಣೆಗೆ ಕ್ರಮ ವಹಿಸಿ ಉದ್ಯಾನವನದ ಅಂದಕ್ಕೆ ಧಕ್ಕೆ ಬಾರದಂತೆ ಕ್ರಮ ವಹಿಸಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.

ಕಂಟೈನರ್ ಗಳನ್ನು ಹರಾಜು ಹಾಕಿದಲ್ಲಿ ನಗರಸಭೆಗೆ ಆದಾಯ ಬರುವುದರ ಜೊತೆಗೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಸೊಳ್ಳೆಗಳ ನಿಯಂತ್ರಣವೂ ಸಾಧ್ಯವಾಗಲಿದೆ. ಅಧಿಕಾರಿಗಳು ಕಂಟೈನರ್ ಗಳನ್ನು ಶೀಘ್ರ ನಗರಸಭೆ ಕಚೇರಿ ಆವರಣದಿಂದ ಸ್ಥಳಾಂತರ ಮಾಡಬೇಕು. ಇಲ್ಲದಿದ್ದಲ್ಲಿ ನಗರಸಭೆ ಉದ್ಯಾನವನ ಸೊಳ್ಳೆಗಳ ಆಶ್ರಯ ತಾಣವಾಗಲಿದೆ. ಈ ಸಂಬಂಧ ಜನಪ್ರತಿನಿಧಿಗಳು ಅಗತ್ಯ ಕ್ರಮವಹಿಸಬೇಕು.

- ವಿಮಲಮ್ಮ, ನಿವೃತ್ತ ಶಿಕ್ಷಕಿ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News