ಮುಕ್ತ, ನಿಷ್ಪಕ್ಷಪಾತ ಮತದಾನ ಮತಗಟ್ಟೆ ಅಧಿಕಾರಿಯ ಜವಾಬ್ದಾರಿ: ಶಿವಮೊಗ್ಗ ಜಿಲ್ಲಾಧಿಕಾರಿ ಎಂ.ಲೋಕೇಶ್

Update: 2018-06-03 12:57 GMT

ಶಿವಮೊಗ್ಗ, ಜೂ. 3:  ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳುವುದು ಮತಗಟ್ಟೆ ಅಧಿಕಾರಿ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ತಿಳಿಸಿದರು.

ಅವರು ಭಾನುವಾರ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮತದಾನದ ದಿನದಂದು ಯಾವುದೇ ಖೋಟಾ ಮತಪತ್ರಗಳನ್ನು ಮತದಾರರು ಮತಪೆಟ್ಟಿಗೆಯಲ್ಲಿ ಹಾಕದಂತೆ ಎಚ್ಚರ ವಹಿಸಬೇಕು. ಮತಪತ್ರವನ್ನು ಮತದಾರರಿಗೆ ನೀಡುವ ಮೊದಲು ಗುರುತು ಮೊಹರನ್ನು ದಾಖಲಿಸಿ ಮತಗಟ್ಟೆ ಅಧಿಕಾರಿ ಪೂರ್ಣ ಸಹಿಯನ್ನು ಹಾಕಬೇಕು. ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯ ಕ್ರಮದಲ್ಲಿ ಅಂಕಿ ಬರೆಯುವ ಮೂಲಕ ಮತ ಚಲಾಯಿಸಬೇಕು. ಇದಕ್ಕೆ ನೇರಳೆ ಬಣ್ಣದ ಸ್ಕೆಚ್ ಪೆನ್ ಬಳಸಬೇಕು. ಸರಬರಾಜು ಮಾಡಿರುವ ಪೆನ್‍ಗಳು ಸರಿಯಾಗಿ ಬರೆಯುವುದೇ ಎಂಬುವುದನ್ನು ಮೊದಲೇ ಖಾತ್ರಿಪಡಿಸಕೊಳ್ಳಬೇಕು ಎಂದು ಅವರು ತಿಳಿಸಿದರು.

ಮತದಾನದ ಹಿಂದಿನ ದಿನ ಮೊದಲೇ ತಿಳಿಸಿದ ಸ್ಥಳದಲ್ಲಿ ಹಾಜರಿದ್ದು ಚುನಾವಣಾ ಸಾಮಾಗ್ರಿಗಳನ್ನು ಪಡೆದುಕೊಳ್ಳಬೇಕು. ಪ್ರತಿಯೊಂದು ಮತಪತ್ರಗಳನ್ನು ಹಾಗೂ ಅನುಕ್ರಮ ಸಂಖ್ಯೆಗಳನ್ನು ಪರಿಶೀಲಿಸಬೇಕು. ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಮತದಾನದ ಹಿಂದಿನ ದಿನ ಕಡ್ಡಾಯವಾಗಿ ಮತಗಟ್ಟೆಯಲ್ಲಿಯೇ ವಾಸ್ತವ್ಯ ಇರಬೇಕು. ಮತದಾನ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಬೆಳಿಗ್ಗೆ 6ಗಂಟೆಗೆ ಮತದಾನದ ಎಲ್ಲಾ ಸಿದ್ಧತೆ ಪೂರ್ಣಗೊಳಿಸಬೇಕು ಎಂದರು.

ಮತದಾನ ಆರಂಭವಾಗುವ 15ನಿಮಿಷಗಳ ಮೊದಲು ಮತಪೆಟ್ಟಿಗೆಯನ್ನು ಹಾಜರಿರುವ ಮತದಾನ ಏಜೆಂಟರಿಗೆ ತೋರಿಸಬೇಕು. ಮತಗಟ್ಟೆ ಏಜೆಂಟರ ಅಧಿಕೃತ ನೇಮಕಾತಿ ಪತ್ರವನ್ನು ಪರಿಶೀಲಿಸಿದ ಬಳಿಕ ಮತಗಟ್ಟೆಗೆ ಪ್ರವೇಶ ನೀಡಬೇಕು. ಅಭ್ಯರ್ಥಿಯು ಒಬ್ಬ ಮತಗಟ್ಟೆ ಏಜೆಂಟ್, ಇಬ್ಬರು ರಿಲೀಫ್ ಏಜೆಂಟರನ್ನು ನೇಮಿಸಬಹುದು. ಆದರೆ ಯಾವುದೇ ಹೊತ್ತಿಗೆ ಒಬ್ಬರಿಗೆ ಮಾತ್ರ ಮತಗಟ್ಟೆಗೆ ಅವಕಾಶ ಇರುವುದು. ಮತದಾನ ಮುಕ್ತಾಯವಾದ ನಂತರ ಮತಪತ್ರಗಳ ಲೆಕ್ಕವನ್ನು ಏಜೆಂಟರಿಗೆ ನೀಡಿರುವ ಬಗ್ಗೆ ಪ್ರತಿಯೊಬ್ಬ ಏಜೆಂಟರಿಂದ ಸಹಿಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಚುನಾವಣಾ ಮುಖ್ಯ ತರಬೇತುದಾರ ಯೋಗೀಶ್, ಎನ್‍ಐಸಿ ಅಧಿಕಾರಿ ವೆಂಕಟೇಶ್ ತರಬೇತಿಗೆ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News