ಶಿವಮೊಗ್ಗ: ಹಾಡಹಗಲೇ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಯುವಕ
ಶಿವಮೊಗ್ಗ, ಜೂ. 3: ಹಾಡಹಗಲೇ, ಜನನಿಬಿಡ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಯುವಕನೋರ್ವ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ನಗರದ ವಿದ್ಯಾನಗರ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ವಿದ್ಯಾನಗರ ಬಡಾವಣೆಯ ನಿವಾಸಿಯಾದ ಪ್ರಭು (43) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಅದೇ ಬಡಾವಣೆಯ ರವಿಕುಮಾರ್ (20) ಕೊಲೆ ನಡೆಸಿದ ಆರೋಪಿಯಾಗಿದ್ದಾನೆ. ಘಟನೆಯ ನಂತರ ತಲೆಮರೆಸಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಇನ್ಸ್ ಪೆಕ್ಟರ್ ದೇವರಾಜ್ ಮತ್ತವರ ಸಿಬ್ಬಂಧಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಸೆರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ಹಿನ್ನೆಲೆ: ಹತ್ಯೆಗೀಡಾದ ಪ್ರಭು ವಿವಾಹಿತನಾಗಿದ್ದು, ಆರೋಪಿ ರವಿಕುಮಾರ್ ಪರಿಚಯಸ್ಥನಾಗಿದ್ದ. ಇತ್ತೀಚೆಗೆ ಪ್ರಭು ರವಿಕುಮಾರ್ ನ ಅಣ್ಣನ ವೈವಾಹಿಕ ಜೀವನದ ಬಗ್ಗೆ ಬಹಿರಂಗವಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ. ಈ ಕುರಿತಂತೆ ಆರೋಪಿಯು ಹಲವು ಬಾರಿ ಪ್ರಭುವಿಗೆ ಎಚ್ಚರಿಕೆ ನೀಡಿದ್ದು, ಅಣ್ಣನ ಕುರಿತಂತೆ ಮಾತನಾಡದಂತೆ ಸೂಚಿಸಿದ್ದ ಎನ್ನಲಾಗಿದೆ.
ಇದರ ಹೊರತಾಗಿಯೂ ಪ್ರಭು ಆತನ ಸಹೋದರನ ಕುರಿತಂತೆ ಮಾತನಾಡುವುದನ್ನು ಮುಂದುವರಿಸಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿಯು ವಿದ್ಯಾನಗರದ ವೈನ್‍ಶಾಪ್‍ವೊಂದರ ಬಳಿ ಪ್ರಭುವಿನ ಮೇಲೆ ಮಚ್ಚಿನ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಸಾರ್ವಜನಿಕರು ಪ್ರಭುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.
ನೆರವಿಗೆ ಧಾವಿಸದೆ ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದರು !
ಆರೋಪಿ ರವಿಕುಮಾರ್ ಮಚ್ಚಿನಿಂದ ಅಟ್ಟಾಡಿಸಿ ಪ್ರಭುವನ್ನು ಹೊಡೆಯುತ್ತಿದ್ದರೂ ಅಲ್ಲಿದ್ದ ಜನರು ಜಗಳ ಬಿಡಿಸಲು ಮುಂದಾಗಿಲ್ಲ. ಹಾಗೆಯೇ ಮಚ್ಚಿನ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೀಡಾಗಿ ಬಿದ್ದು ಒದ್ದಾಡುತ್ತಿದ್ದ ಪ್ರಭುವನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಲು ಸ್ಥಳದಲ್ಲಿದ್ದವರು ಹಿಂದೇಟು ಹಾಕಿದ್ದಾರೆ. ಸಹಾಯಕ್ಕೆ ಪ್ರಭು ಗೋಗರೆದರೂ ಯಾರೊಬ್ಬರೂ ನೆರವಿಗೆ ಧಾವಿಸದ ಅಮಾನವೀಯ ಘಟನೆ ಕೂಡ ನಡೆದಿದೆ ಎನ್ನಲಾಗಿದೆ.
ಕೆಲವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಪ್ರಭುವಿಗೆ ನೆರವಾಗುವ ಬದಲು, ಮೊಬೈಲ್ ಫೋನ್‍ನಲ್ಲಿ ಫೋಟೋ-ವೀಡಿಯೋ ಮಾಡುವಲ್ಲಿ ತಲ್ಲೀನವಾಗಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಪೊಲೀಸ್ ಪೇದೆಯೋರ್ವರು ಸಂಕಷ್ಟದಲ್ಲಿದ್ದ ಪ್ರಭುವಿನ ನೆರವಿಗೆ ಧಾವಿಸಿದ್ದಾರೆ. ಆಟೋವೊಂದರಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.