ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಿಜೆಪಿಯ 28 ಅಭ್ಯರ್ಥಿಗಳಿಗೂ ಗೆಲುವು: ಸಂಸದ ಜಿ.ಎಂ. ಸಿದ್ದೇಶ್ವರ್

Update: 2018-06-03 15:24 GMT

ದಾವಣಗೆರೆ,ಜೂ.03: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ 28 ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾದಿಂದ ಬಾಡಾ ಕ್ರಾಸ್‍ನ ಶ್ರೀ ಪುಟ್ಟರಾಜ ಗವಾಯಿಗಳ ವೀರೇಶ್ ಪುಣ್ಯಾಶ್ರಮದಲ್ಲಿ ನೂತನ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ ಅವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶದ ಜನರು ಮೋದಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದೆಯೂ ಅವರ ಅಧಿಕಾರ ನಡೆಸುವುದನ್ನು ಬಯಸುತ್ತಿದ್ದಾರೆ. ಈ ರಾಜ್ಯದಲ್ಲೂ ಪ್ರಧಾನ ಮಂತ್ರಿ ಮೋದಿ ಅವರಿಗೆ ಜನರು ಬೆಂಬಲ ನೀಡುವುದರಿಂದ ರಾಜ್ಯದ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಜಿಲ್ಲೆಯ ಜನರು ಬಯಸಿದ್ದು, ಪಕ್ಷದ ಆರು ಶಾಸಕರನ್ನು ಆಯ್ಕೆ ಮಾಡಿದ್ದರು. ಆದರೆ, ಪಕ್ಷಕ್ಕೆ ಬಹುಮತ ದೊರಕದ ಕಾರಣ ಅಧಿಕಾರದಿಂದ ನಾವು ವಂಚಿತರಾಗಬೇಕಾಯಿತು ಎಂದರು.

ನೂತನ ಶಾಸಕ ಎಸ್.ಎ. ರವೀಂದ್ರನಾಥ ಮಾತನಾಡಿ, ನಗರದ ಜನತೆಗೆ ಸಮರ್ಪಕವಾಗಿ ಕುಡಿಯಲು ನೀರು ಕೊಟ್ಟಿಲ್ಲ. ರಸ್ತೆ, ಚರಂಡಿಗಳು ಸರಿಯಾಗಿಲ್ಲ. ಇಂತಹ ಅನೇಕ ಸಮಸ್ಯೆಗಳು ಕ್ಷೇತ್ರದಲ್ಲಿದ್ದು, ಅದನ್ನೆಲ್ಲ ಈಗ ಸರಿಪಡಿಸಬೇಕಿದೆ. ಜನರ ಮೂಲ ಆಶಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. 

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ಸಂಘಟನಾ ಕಾರ್ಯದರ್ಶಿ ಹೆಚ್. ಶ್ರೀನಿವಾಸ್ ಗುಮ್ಮನೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಯಕೊಂಡದ ಶಾಸಕ ಪ್ರೊ. ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಪಿ. ಲೋಹಿತ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯ ಆಲೂರು ಲಿಂಗರಾಜ್, ಬಿಜೆಪಿ ಮುಖಂಡರಾದ ಅಣಬೇರು ಶಿವಮೂರ್ತಿ, ಹೆಚ್.ಕೆ. ಬಸವರಾಜ್, ಹನುಮಂತ ನಾಯ್ಕ, ಎಂ.ಎಸ್. ಸಿದ್ದೇಶ್ ಕೋಟೆಹಾಳ್, ಓಬಿಸಿ ಜಿಲ್ಲಾ ಮೋರ್ಚಾದ ಕಾರ್ಯದರ್ಶಿ ಎಂ. ಮನು ಮತ್ತಿತರರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News