ಶಿವಮೊಗ್ಗ: ಧಾರಾಕಾರ ಮಳೆಗೆ ಉಕ್ಕಿ ಹರಿದ ರಾಜಕಾಲುವೆ, ಚರಂಡಿಗಳು
ಶಿವಮೊಗ್ಗ, ಜೂ. 3: ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ-ಬೇಜವಾಬ್ದಾರಿ ಧೋರಣೆಯಿಂದ, ಪ್ರತಿ ವರ್ಷದಂತೆ ಈ ಬಾರಿಯ ಮುಂಗಾರು ಮಳೆಯ ವೇಳೆಯು ಶಿವಮೊಗ್ಗ ನಗರದ ತಗ್ಗು ಪ್ರದೇಶಗಳು ಜಲಾವೃತವಾಗುವುದು ಬಹುತೇಕ ನಿಶ್ಚಿತವಾದಂತಿದೆ. ಜನಸಾಮಾನ್ಯರು ತೊಂದರೆ ಅನುಭವಿಸುವುದು ಖಚಿತವಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ಭಾನುವಾರ ಮಧ್ಯಾಹ್ನ ನಗರದಲ್ಲಿ ಬಿದ್ದ ಧಾರಾಕಾರ ಮಳೆಯ ವೇಳೆ ನಗರದ ಹಲವು ಕಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಹಲವೆಡೆ ರಸ್ತೆಗಳ ಮೇಲೆ ರಾಜಕಾಲುವೆ ಹಾಗೂ ಚರಂಡಿಯ ನೀರು ಹರಿದು ಜನ-ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುವಂತಾಗಿತ್ತು.
ಈ ಹಿಂದಿನ ವರ್ಷಗಳಂತೆ ಈ ಬಾರಿಯು ಪಿಎಲ್‍ಡಿ ಬ್ಯಾಂಕ್ (ಕಾಂಗ್ರೆಸ್ ಕಚೇರಿ ಎದುರು) ರಸ್ತೆಯಲ್ಲಿರುವ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ, ರಸ್ತೆಯು ಮೇಲೆ ಸುಮಾರು ಎರಡೂವರೆ ಅಡಿಯಷ್ಟು ನೀರು ಹರಿಯುತ್ತಿತ್ತು. ಇದರಿಂದ ಕೆಲ ಸಮಯ ಜನ-ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರಾಜಕಾಲುವೆ ಉಕ್ಕಿ ಹರಿದಿದ್ದರಿಂದ ಸಮೀಪದ ಬ್ಯೂಟಿಕ್ ಶಾಪ್ ಎದುರಿನ ಅಡ್ಡ ರಸ್ತೆಯು ಚರಂಡಿ ನೀರಿನಿಂದ ಜಲಾವೃತವಾಗಿತ್ತು. ಸಮೀಪದ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಈ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಬಾಲರಾಜ ಅರಸ್ ರಸ್ತೆಯ ಮಥುರ ಪ್ಯಾರಡೈಸ್ ಹೋಟೆಲ್‍ನಿಂದ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಒಡೆತನಕ್ಕೆ ಸೇರಿದ ಪೆಟ್ರೋಲ್ ಬಂಕ್ ನಡುವಿನ ಚರಂಡಿಯು ಅವ್ಯವಸ್ಥೆಯ ಆಗರವಾಗಿರುವ ಪರಿಣಾಮ, ಸರಾಗವಾಗಿ ಮಳೆ ನೀರು ಹರಿಯಲು ಸಾಧ್ಯವಾಗದೇ ತಗ್ಗು ಪ್ರದೇಶದ ಕಟ್ಟಡಗಳಿಗೆ ಕೊಳಚೆ ನೀರು ಹರಿಯಿತು. ಇದರಿಂದ ವರ್ತಕರು ತೀವ್ರ ತೊಂದರೆ ಎದುರಿಸುವಂತಾಯಿತು.
'ಕಳೆದ ಹಲವು ವರ್ಷಗಳಿಂದ ಪಿಎಲ್‍ಡಿ ಬ್ಯಾಂಕ್ ಮುಖ್ಯ ರಸ್ತೆಯ ರಾಜಕಾಲುವೆ ಹಾಗೂ ಬಾಲರಾಜ್ ಅರಸ್ ರಸ್ತೆಯ ಮಥುರಾ ಪ್ಯಾರಡೈಸ್ ಹೋಟೆಲ್ ಎದುರಿನ ಚರಂಡಿ ಉಕ್ಕಿ ಹರಿದು ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ. ಈ ವಿಷಯ ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೂ ತರಲಾಗಿದೆ. ಆದರೆ ಇಲ್ಲಿಯವರೆಗೂ ಪಾಲಿಕೆ ಆಡಳಿತ ಪರಿಹಾರ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಬರೀ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಜನರ ಸಮಸ್ಯೆ ಪರಿಹರಿಸುವ ಕಿಂಚಿತ್ತೂ ಕಾಳಜಿಯೂ ಅವರಿಗಿಲ್ಲವಾಗಿದೆ' ಎಂದು ಸ್ಥಳೀಯ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೆರೆಯಾದ ಬಸ್‍ನಿಲ್ದಾಣ: ಕಳೆದ ಕೆಲ ವರ್ಷಗಳ ಹಿಂದೆ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಖಾಸಗಿ ಬಸ್ ನಿಲ್ದಾಣ ಆವರಣ, ಬಿ.ಹೆಚ್.ರಸ್ತೆಯ ಹಲವೆಡೆಯೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ಬಸ್ ನಿಲ್ದಾಣ ಆವರಣವಂತೂ ಅಕ್ಷರಶಃ ಕೆರೆಯಂತಾಗಿ ಪರಿಣಮಿಸಿತ್ತು. ಪ್ರಯಾಣಿಕರು ತೀವ್ರ ತೊಂದರೆ ಎದುರಿಸುವಂತಾಯಿತು.
ಆಲ್ಕೋಳದ ಬಿ.ಹೆಚ್.ರಸ್ತೆಯ ಇಕ್ಕೆಲಗಳಲ್ಲಿಯೂ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣದಿಂದ, ಮಳೆ ನೀರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಹರಿಯಿತು. ಶರಾವತಿ ನಗರ 60 ಅಡಿ ರಸ್ತೆಯ ಸೇತುವೆಯ ಮೇಲೆ ಸುಮಾರು ಅರ್ಧ ಅಡಿಯಷ್ಟು ನೀರು ಹರಿದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ನಗರದ ಹಲವು ತಗ್ಗು ಪ್ರದೇಶಗಳಲ್ಲಿ ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದ ಪರಿಣಾಮದಿಂದ ಹಲವು ರೀತಿಯ ಸಮಸ್ಯೆಗಳನ್ನು ಸ್ಥಳೀಯ ನಿವಾಸಿಗಳು ಎದುರಿಸುವಂತಾಯಿತು.
ಎಚ್ಚೆತ್ತುಕೊಳ್ಳಲಿ: ನಗರದ ಹಲವು ಕಡೆ ಪ್ರಮುಖ ರಾಜಕಾಲುವೆ ಹಾಗೂ ಚರಂಡಿಗಳು ಅವ್ಯವಸ್ಥೆಯ ಆಗರವಾಗಿವೆ. ಕೆಲವೆಡೆ ಒತ್ತುವರಿಯಾಗಿದ್ದರೆ, ಇನ್ನೂ ಹಲವೆಡೆ ಕಸಕಡ್ಡಿ-ಹೂಳು ತುಂಬಿಕೊಂಡಿದೆ. ಮತ್ತೆ ಕೆಲವೆಡೆ ಚರಂಡಿಗಳೇ ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಕಳೆದ ಹಲವು ವರ್ಷಗಳಿಂದ ಒತ್ತುವರಿಯಾಗಿರುವ ಹಾಗೂ ಅವ್ಯವಸ್ಥಿತ ಸ್ಥಿತಿಯಲ್ಲಿರುವ ರಾಜಕಾಲುವೆ ಸುಸ್ಥಿತಿಗೆ ತರುವ ಕೆಲಸ ಮಾಡಲಾಗುವುದು. ಅಮೃತ್, ಸ್ಮಾರ್ಟ್ ಸಿಟಿ ಯೋಜನೆಯ ಅನುದಾನ ಬಳಕೆ ಮಾಡಲಾಗುವುದು ಎಂದೆಲ್ಲ ಅಧಿಕಾರಿಗಳು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಅವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಕಂಡುಬರದಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ.
ಇನ್ನಾದರೂ ಮಹಾನಗರ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಬೇಕು. ಸಮರೋಪಾದಿಯಲ್ಲಿ ಅವ್ಯವಸ್ಥಿತ ಸ್ಥಿತಿಯಲ್ಲಿರುವ ರಾಜಕಾಲುವೆ, ಚರಂಡಿಯ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಅಗ್ರಹಿಸಿದ್ದಾರೆ.
ಚುನಾವಣಾ ಗುಂಗಿನಿಂದ ಆಡಳಿತ ಹೊರಬರಲಿ : ಮುಖಂಡ ಎನ್.ಗೋಪಿನಾಥ್
'ಮುಂಗಾರು ಮಳೆ ಆರಂಭಕ್ಕೂ ಪೂರ್ವಭಾವಿಯಾಗಿ ಮಹಾನಗರ ಪಾಲಿಕೆ ಆಡಳಿತ ಸೂಕ್ತ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಜಲಾವೃತವಾಗುವ ಪ್ರದೇಶಗಳನ್ನು ಗುರುತಿಸಿ ಪರಿಹಾರೋಪಾಯ ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ ಚುನಾವಣೆಯ ಕಾರಣದಿಂದ ಸಮರ್ಪಕ ಪೂರ್ವ ಸಿದ್ಧತೆಗಳನ್ನು ಆಡಳಿತ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಮುಂಗಾರು ಮಳೆಯ ಪ್ರಾರಂಭದಲ್ಲಿಯೇ ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗುವಂತಾಗಿದೆ. ಧಾರಾಕಾರ ಮಳೆಯಾದ ವೇಳೆಯಲ್ಲೆಲ್ಲ ಇದೇ ಸ್ಥಿತಿ ಕಂಡುಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು' ಎಂದು 'ನನ್ನ ಕನಸಿನ ಶಿವಮೊಗ್ಗ' ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಗೋಪಿನಾಥ್ ಸಲಹೆ ನೀಡುತ್ತಾರೆ.