ದಲಿತರಿಗೆ ಆ ಕಾಲದಲ್ಲೇ ಶಿಕ್ಷಣ ನೀಡಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಿಗರು: ಸಾಹಿತಿ ಬನ್ನೂರು ಕೆ.ರಾಜು

Update: 2018-06-03 17:05 GMT

ಮೈಸೂರು,ಜೂ.3: ಹಿಂದುಳಿದ ಹಾಗೂ ದಲಿತರಿಗೆ ಆ ಕಾಲದಲ್ಲೇ ಶಿಕ್ಷಣ ನೀಡಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಿಗರು ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ಕರ್ನಾಟಕ ಸೇನಾ ಪಡೆಯ ವತಿಯಿಂದ ರವಿವಾರ ಅರಮನೆ ಆವರಣದ ಒಳಗೆ ಮೈಸೂರಿನ ಪ್ರಖ್ಯಾತ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134 ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೈಸೂರಿನ ಅರಮನೆಗೆ ಬರುವ ಪ್ರವಾಸಿಗರಿಗೆ ಮೈಸೂರು ಪಾಕ್ ಹಂಚಿ ಹುಟ್ಟುಹಬ್ಬ ಆಚರಿಸಲಾಯಿತು.

ಇದೇ ವೇಳೆ ಮಾತನಾಡಿದ ಅವರು, ಹಿಂದುಳಿದ ವರ್ಗ ಹಾಗು ದಲಿತರಿಗೆ ಶಿಕ್ಷಣ ನೀಡಿದವರಲ್ಲಿ ನಾಲ್ವಡಿ ಪ್ರಮುಖರು. ಮೈಸೂರು ಮಹರಾಜರುಗಳಲ್ಲೇ ಅತೀ ಹೆಚ್ಚು ಅಭಿವೃದ್ದಿ ಮಾಡಿದವರು. ಆಗಲೇ ಪ್ರಜಾಪ್ರತಿನಿಧಿ ಸಭೆ ಮಾಡಿ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿದರು. ಇಂದಿನ ಮುಡಾ, ಮಹಾನಗರ ಪಾಲಿಕೆ, ಮೈಸೂರು ವಿಶ್ವವಿದ್ಯಾನಿಲಯ, ಕನ್ನಂಬಾಡಿ ಕಟ್ಟೆ, ಶಿವನ ಸಮುದ್ರ ಜಲವಿದ್ಯುತ್ ಯೋಜನೆ ಹಾಗೂ ಅನೇಕ ಕೈಗಾರಿಕೆಗಳ ಸ್ಥಾಪನೆಗಳ ರುವಾರಿ ನಾಲ್ವಡಿ ಎಂದು ಸ್ಮರಿಸಿದರು. 

ಕರ್ನಾಟಕ ಸೇನಾ ಪಡೆಯಂತಹ ಕನ್ನಡ ಪರ ಸಂಘಟನೆ ಇಂದು ಅವರ ಜಯಂತಿ ಕಾರ್ಯಕ್ರಮ ಮಾಡಿರುವುದು ಅತ್ಯಂತ ಶ್ಲಾಘನೀಯ. ಯಾವ ಸಂಘ ಸಂಸ್ಥೆಗಳೂ ಮಾಡದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಚರಿತ್ರೆ ಪುಸ್ತಕವನ್ನು ಕರ್ನಾಟಕ ಸೇನಾ ಪಡೆ ಮೂರು ತಿಂಗಳ ಹಿಂದೆ ಬಿಡುಗಡೆ ಮಾಡಿರುವುದು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವ ಒಳ್ಳೆಯ ಕಾರ್ಯ. ಆದರೆ  ಜಿಲ್ಲಾಡಳಿತ ನಾಲ್ವಡಿಯವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸದಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೊಬ್ಬ ಅತಿಥಿ ಡಾ. ರಘುರಾಂ ವಾಜಪೇಯಿ ಮಾತನಾಡಿ, ನಾಲ್ವಡಿ ಯವರ ಕೊಡುಗೆ ಅಪಾರ ಮತ್ತು ಅನನ್ಯ. ಅವರು ಮಹಾತ್ಮಾ ಗಾಂಧಿ ಯವರಿಂದ ರಾಜರ್ಷಿ ಎನಿಸಿಕೊಂಡರು. ಮೈಸೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದರು. ಇವರು ಮೈಸೂರಿನ ಆಧುನಿಕ ಶಿಲ್ಪಿ ಎಂದರು.  

ಕಾರ್ಯಕ್ರಮ ದಲ್ಲಿ ಎಂ ಎನ್ ದೊರೆಸ್ವಾಮಿ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಾಂತಮೂರ್ತಿ ಆರ್, ಪ್ರಜೀಶ, ಮನುನಾಯಕ್, ಮಿನಿ ಬಂಗಾರಪ್ಪ, ಸುನಿಲ್ ಕುಮಾರ್, ಹರೀಶ್ ಅಂಕಿತ್, ಶಾಂತರಾಜೇ ಅರಸ್, ಅಕ್ಷಯ್, ವಿಜಯೇಂದ್ರ, ಬಸವಣ್ಣ, ರಾಜಶೇಖರ್, ನಟ, ಗುರುಮಲ್ಲಪ್ಪ, ನಂಜುಂಡಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News