ನಾಗಮಂಗಲ: ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಶಾಸಕ ಎನ್.ಮಹೇಶ್

Update: 2018-06-03 17:12 GMT

ನಾಗಮಂಗಲ, ಜೂ.3: ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಮೈತ್ರಿ ಸರಕಾರವಿದ್ದು, ಮೈತ್ರಿ ಧರ್ಮದಂತೆ ನನಗೆ ಮಂತ್ರಿ ಸ್ಥಾನ ಕೊಡುವುದು ಸಿಎಂ ಕುಮಾರಸ್ವಾಮಿ ಅವರ ಪರಮಾಧಿಕಾರವಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಹಾಗೂ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ರವಿವಾರ ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮಿಜಿ ಅವರ ಆಶೀರ್ವಾದ ಪಡೆದ ನಂತರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳ ವರದಿಯಂತೆ ನನಗೂ ಮೈತ್ರಿ ಸರಕಾರದಲ್ಲಿ  ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದರು.

ಮಾಧ್ಯಮಗಳ ವಿಶ್ಲೇಷಣೆಯಂತೆ ಸಮಾಜ ಕಲ್ಯಾಣ ಮಂತ್ರಿ ಸ್ಥಾನ ಸಿಗುವ ಭರವಸೆ ಇದೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯಿತ್ತು. ಆದರೆ, ಆ ಖಾತೆ ಕಾಂಗ್ರೆಸ್ ಪಾಲಾಗಿದೆ ಎಂದರು.

ನಾನು ಶಿಕ್ಷಣ ಖಾತೆಗೆ ಮೊದಲ ಆದ್ಯತೆ ನೀಡುತ್ತೇನೆ. ನಂತರ, ಪೌರಾಡಳಿತ ಖಾತೆ ಇಲ್ಲವೆ ಸಣ್ಣ ನೀರಾವರಿ ಖಾತೆ ನೀಡಿದರೆ ರಾಜ್ಯದಲ್ಲಿ ಸ್ಲಂ ವಾರ್ಡ್‍ಗಳ ಹಾಗೂ ಕೆರೆಕಟ್ಟೆಗಳ ಅಭಿವೃದ್ದಿಗೆ ಕೆಲಸಮಾಡಲು ಸಾಕಷ್ಟು ಅವಕಾಶಗಳಿವೆ. ಈ ಮೂರು ಖಾತೆಗಳಲ್ಲಿ ಯಾವುದನ್ನಾದರೂ ಮುಖ್ಯಮಂತ್ರಿಗಳು ನೀಡುವ ಭರವಸೆಯಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಮೈತ್ರಿ ಸರಕಾರ ಐದು ವರ್ಷ ಸುಭದ್ರವಾಗಿ ನಡೆಯಲಿದೆ. ಆ ಬಗ್ಗೆ ಯಾವುದೇ ಅನುಮಾನವಿಲ್ಲ. ಮುಂದಿನ ಲೋಕಸಭೆ ಚುನಾವಣೆಗೆ ಮೈತ್ರಿ ವಿಚಾರದಲ್ಲಿ ಬಿಎಸ್ಪಿ ವರಿಷ್ಠರಾದ ಮಾಯಾವತಿಯವರು ನಿರ್ಧರಿಸುತ್ತಾರೆ. ನನ್ನ ಗೆಲುವು ಪಕ್ಷಕ್ಕೆ ಹೆಚ್ಚು ಮೌಲ್ಯವನ್ನು ತಂದಿದ್ದು, ರಾಜ್ಯದಲ್ಲಿರುವ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಅವರು ಹೇಳಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ಕಾರ್ಯದರ್ಶಿ ಗದ್ದೇಭೂವನಹಳ್ಳಿ ವರದರಾಜ್, ತಾಲೂಕು ಅಧ್ಯಕ್ಷ ಕೆ.ಎಚ್.ಮಹದೇವ್, ಲೋಕೇಶ್, ಸುರೇಶ್, ಬೆಟ್ಟದಮಲ್ಲೇನಹಳ್ಳಿ ರಮೇಶ್, ನಾಗೇಶ್, ಕಂಚಿನಕೋಟೆ ಮೂರ್ತಿ, ಹುರುಳಿಗಂಗನಹಳ್ಳಿ ಮಹದೇವ್, ಮುಳುಕಟ್ಟೆ ಶಿವರಾಮಯ್ಯ ಮಹೇಶ್, ಕಾರ್ಯಕರ್ತರು ಟಿಬಿ ವೃತ್ತದಲ್ಲಿ ಪಟಾಕಿ ಸಿಡಿಸಿ ಮಹೇಶ್ ಅವರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News