ಅವಕಾಶವಾದಿ ಮೈತ್ರಿಕೂಟ ಶೀಘ್ರವೇ ಅಂತ್ಯ: ಬಿ.ಎಸ್.ಯಡಿಯೂರಪ್ಪ

Update: 2018-06-03 17:29 GMT

ತುಮಕೂರು,ಜೂ.03: ರಾಜ್ಯದ ಆರು ಕೋಟಿ ಜನರ ವಿರುದ್ಧವಾಗಿ ಅವಕಾಶವಾದಿ ರಾಜಕಾರಣ ನಡೆಯುತ್ತಿದೆ. ಇದೆಲ್ಲವನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಜನರ ಒಪ್ಪಿಗೆ ಇಲ್ಲದೆ ನಡೆಯುತ್ತಿರುವ ಅವಕಾಶವಾದಿ ಮೈತ್ರಿ ಕೂಟದ ರಾಜಕಾರಣಕ್ಕೆ ಶೀಘ್ರದಲ್ಲಿಯೇ ಅಂತ್ಯ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ನಗರದ ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯದ ಶಿಕ್ಷಕರ ಸಮಸ್ಯೆಯನ್ನು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬಗೆಹರಿಸಿಲ್ಲ. ಶಿಕ್ಷಕರ ಸಮಸ್ಯೆಯನ್ನು ಕಡೆಗಣಿಸಿದೆ ಎಂದು ದೂರಿದರು. 

ಶಿಕ್ಷಕರ ಸಮಸ್ಯೆ ಬಗೆಹರಿಸುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಭಾಷಣಕ್ಕೆ ಸೀಮಿತವಾಗಿದೆಯೇ ಹೊರತು ಕಾರ್ಯಗತಕ್ಕೆ ಬರುವುದಿಲ್ಲ. ಶಿಕ್ಷಕರ ವರ್ಗಾವಣೆ ನೀತಿ, ವೇತನ ತಾರತಮ್ಯ ಸೇರಿದಂತೆ ಇನ್ನು ನಾನಾ ಸಮಸ್ಯೆ ಬಗೆಹರಿಸುವಲ್ಲಿ ಹಿಂದೆ ಇದ್ದ ಕಾಂಗ್ರೆಸ್ ಸರಕಾರದ ಆಡಳಿತದಿಂದ ಹಿಡಿದು ಈ ವರೆಗೂ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಬಿಜೆಪಿಗೆ ಬೆಂಬಲ ಸೂಚಿಸಿ. ಮುಂದಿನ ದಿನಗಳಲ್ಲಿ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಬಗಹರಿಸುತ್ತೇನೆ ಎಂದು ಭರವಸೆ ನೀಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಾಜಿ ಶಾಸಕ ವೈ.ಎ. ನಾರಾಯಣಸ್ವಾಮಿ ಕಣಕ್ಕಿಳಿದಿದ್ದು, ಇದಕ್ಕೂ ಮೊದಲು ಹಾಲನೂರು ಲೇಪಾಕ್ಷಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರನ್ನು ಬದಲಾವಣೆ ಮಾಡಬೇಕಾಯಿತು. ನಾನು ಲೇಪಾಕ್ಷಿ ಕರೆದು ಮಾತನಾಡಿದ್ದೇನೆ. ಆತ ಕ್ಷೇತ್ರದಲ್ಲಿಯೇ ಓಡಾಡಿ ಹಣ ಖರ್ಚು ಮಾಡಿಕೊಂಡಿದ್ದಾರೆ. ಆದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವೈ.ಎ. ನಾರಾಯಣಸ್ವಾಮಿ ಗೆದ್ದರೆ, ಹಾಲನೂರು ಲೇಪಾಕ್ಷಿಯೇ ಗೆದ್ದಂತೆ. ಹಾಗಾಗಿ ಹಾಲನೂರು ಲೇಪಾಕ್ಷಿಯೇ ಅಭ್ಯರ್ಥಿ ಎಂದುಕೊಂಡು ಮತನೀಡಿ ಎಂದು ಮನವಿ ಮಾಡಿದರು.

ಶಿಕ್ಷಕರೆಲ್ಲರೂ ಜಾತ್ಯಾತೀತವಾಗಿ ಕೈ ಜೋಡಿಸುವ ಮೂಲಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಗೆಲುವಿಗಾಗಿ ಮತಚಲಾಯಿಸಬೇಕಾಗಿದೆ. ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ, ಆಗ್ನೇಯ ಶಿಕ್ಷಕರ ಕ್ಷೇತ್ರದ ಉತ್ತಮ ಅಭ್ಯರ್ಥಿಯ ಗೆಲುವಿನ ಆಯ್ಕೆಯೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು. 

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನಡೆಸುತ್ತಿದ್ದು, 2025ರ ವೇಳೆಗೆ ನವಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಅಂತೆಯೇ ರಾಜ್ಯವನ್ನೂ ನವ ಕರ್ನಾಟಕವನ್ನಾಗಿ ನಿರ್ಮಾಣ ಮಾಡಲು ಬಿಜೆಪಿಯನ್ನು ಬೆಂಬಲಿಸಲೇಬೇಕಾಗಿದೆ. ದೇಶದ ಜಿಡಿಪಿ 7.7ಕ್ಕೆ ಜಿಗಿತವಾಗಿರುವ ಕಾರಣ ದೇಶ ಆರ್ಥಿಕಾಭಿವೃದ್ಧಿಯಲ್ಲಿ ಮುಂದೆ ಸಾಗಲಿದೆ. ಮುಂದಿನ ದಿನಗಳಲ್ಲಿ ಪ್ರಪಂಚದಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಸಾಧಿಸಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ. ಹೀಗಾಗಿಯೇ ಕಳೆದ ನಾಲ್ಕು ವರ್ಷಗಳಿಂದ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತವನ್ನು ಕಾಣುತ್ತಿದ್ದೇವೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಶಿಕ್ಷಕರೆಲ್ಲರೂ ಜಾತ್ಯಾತೀತವಾಗಿ ಬಿಜೆಪಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯ ಗೆಲುವಿಗೆ ಮತ ಚಲಾಯಿಸಬೇಕಾಗಿದೆ ಎಂದು ಹೇಳಿದರು. 

ಮಾಜಿ ಶಾಸಕ ಬಿ. ಸುರೇಶ್‍ಗೌಡ ಮಾತನಾಡಿ, ಬಿಜೆಪಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಪ್ರತಿಷ್ಟೆಯ ಪ್ರಶ್ನೆಯಾಗಿದ್ದು, ಗೆಲುವು ಸಾಧಿಸಲೇಬೇಕಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಇನ್ನೂ ಆರು ತಿಂಗಳಲ್ಲಿ ಮುರಿದು ಬೀಳಲಿದೆ. ದೇವೇಗೌಡರು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಮಾತನಾಡಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಓಟು ದೋಚಲು ಸುಳ್ಳು ಭರವಸೆ ನೀಡುತ್ತಿದ್ದಾರೆ. ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಆಗ ಶಿಕ್ಷಕರ ಸಮಸ್ಯೆಗಳು ಬಗೆಹರಿಯಲಿವೆ ಎಂದರು.    

ಮೈತ್ರಿ ಸರಕಾರದಿಂದ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಇದನ್ನು ಮನಗಂಡಿರುವ ಶಿಕ್ಷಕರು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ಇನ್ನು ಮುಂದೆ ವೈ.ಎ.ನಾರಾಯಣಸ್ವಾಮಿ ನಿಮ್ಮ ಕ್ಷೇತ್ರದಲ್ಲಿಯೇ ಇರುತ್ತಾರೆ ಅವರನ್ನು ನೀವು ಗೆಲ್ಲಿಸಿ ಎಂದು ಮನವಿ ಮಾಡಿದರು.  

ಮಾಜಿ ಸಂಸದ ಜಿ.ಎಸ್. ಬಸವರಾಜು, ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ,ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಆರ್. ಹುಲಿನಾಯ್ಕರ್, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಂದೀಪ್ ಭೂದಾಳ್, ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಡಿ. ಕೃಷ್ಣಕುಮಾರ್, ಎಸ್.ಆರ್. ಗೌಡ, ಬಿಜೆಪಿ ಕಾರ್ಯದರ್ಶಿ ರವಿ ಹೆಬ್ಬಾಕ, ಸರೋಜ ಗೌಡ, ರುದ್ರೇಶ್, ಪೆಪ್ಸಿ ಬಸವರಾಜು, ಲಕ್ಷ್ಮೀಶ್, ಸದಾಶಿವಯ್ಯ ಸೇರಿದಂತೆ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News