ತುಮಕೂರು: 'ಅನ್ನ ನೀಡಿದ ಅಮ್ಮ' ವಿಶೇಷ ಕಾರ್ಯಕ್ರಮ
ತುಮಕೂರು,ಜೂ.03: ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಪತ್ನಿ ರಾಜಲಕ್ಷ್ಮಿ ಬಡತನದ ನಡುವೆಯೂ ಇನ್ನೊಬ್ಬರ ಕಷ್ಟಕ್ಕೆ ಸಂದಿಸುವ ಅಪರೂಪದ ಗುಣವನ್ನು ಮೈಗೂಡಿಸಿಕೊಂಡವರು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ನ್ಯಾ.ನಾಗಮೋಹನದಾಸ್ ತಿಳಿಸಿದ್ದಾರೆ.
ನಗರದ ಕನ್ನಡಭವನದಲ್ಲಿ ಬರಗೂರು ಬಳಗ ಆಯೋಜಿಸಿದ್ದ ಅನ್ನ ನೀಡಿದ ಅಮ್ಮ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಆರಂಭದ ದಿನಗಳಲ್ಲಿ ತಾವೇ ಅರೆ ಹೊಟ್ಟೆಯಲ್ಲಿದ್ದರೂ ತಮ್ಮ ಶಿಷ್ಯರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವರು ತಮ್ಮಂತೆಯೇ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಹಕಾರ ನೀಡಿದವರು. ಅವರ ಈ ನಡೆ ಇತರರಿಗೆ ಮಾದರಿ ಎಂದರು.
ರಾಜಲಕ್ಷ್ಮಿ ಅವರು ಈ ಭೂಮಿಯಿಂದ ಕಣ್ಮರೆಯಾಗಿರಬಹುದು. ಆದರೆ ಅವರು ಮಾಡಿದ ಸಮಾಜ ಸೇವೆಗಳು ನಮ್ಮ ನಡುವೆ ಇವೆ. ಅವುಗಳನ್ನು ಮತ್ತಷ್ಟು ಪರಿಣಾಮಕಾರಿ ಮುಂದುವರೆಸುವ ನಿಟ್ಟಿನಲ್ಲಿ ಬರಗೂರು ರಾಮಚಂದ್ರಪ್ಪ ಅವರು ಮುನ್ನೆಡೆಯಬೇಕು. ಅವರೊಂದಿಗೆ ಅವರ ಅಪಾರ ಶಿಷ್ಯಕೋಟಿ ಇದೆ. ನಾವುಗಳಿದ್ದೇವೆ ಎಂದು ಧೈರ್ಯ ತುಂಬಿದರು.
ಮಧ್ಯಪ್ರದೇಶ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ ಮಾತನಾಡಿ, ಬರಗೂರರ ಎಲ್ಲಾ ಸೃಜನಾತ್ಮಕ ಕಾರ್ಯಕ್ರಮಗಳ ಹಿಂದೆ ರಾಜಲಕ್ಷ್ಮಿ ಅವರಿದ್ದಾರೆ. ನಮ್ಮಂತಹ ಅದೆಷ್ಟೋ ಮಂದಿಯನ್ನು ಬೆಳೆಸಿ ಪ್ರೋತ್ಸಾಹಿಸಿದ್ದಾರೆ. ಅವರ ಹೆಸರಿನಲ್ಲಿ ರಚನಾತ್ಮಕ ಕಾರ್ಯಗಳಿಗೆ ನಾವೆಲ್ಲಾ ಮುಂದಾಗುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡೋಣ ಎಂದರು.
ಚಿತ್ರನಟ ಸುಂದರರಾಜ್ ಮಾತನಾಡಿ, ಅಂತರ್ ಜಾತಿಯ ವಿವಾಹವಾಗಿ ಹಲವಾರು ಕಷ್ಟ ಸುಖಃಗಳ ನಡುವೆ ಸುಂದರ ಬದುಕು ಕಟ್ಟಿಕೊಂಡವರು ಬರಗೂರು ಕುಟುಂಬ. ಸೂರು ಇಲ್ಲದವರಿಗೆ ತಮ್ಮ ತಂದೆಯಿಂದ ಬಂದ ಹತ್ತಾರು ಎಕರೆ ಭೂಮಿಯನ್ನು ದಾನ ಮಾಡಿ ಅವರು ಸಹ ನಮ್ಮಂತೆಯೇ ಬದುಕಬೇಕೆಂದು ಆಸೆ ಪಟ್ಟವರು. ಅವರ ನೆನಪು ಚಿರಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ರಾಜಲಕ್ಷ್ಮಿ ಬರಗೂರು ಅವರ ಹೆಸರಿನಲ್ಲಿ ತುಮಕೂರು ವಿವಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡುವ ಸಂಬಂಧ ವಿವಿಯ ಕಲಾ ನಿಕಾಯದ ಡೀನ್ ಡಾ.ಎಲ್.ಪಿ.ರಾಜು ಅವರಿಗೆ 1 ಲಕ್ಷ ರೂಗಳ ಚೆಕ್ ವಿತರಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ, ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ, ಪ್ರಾಧ್ಯಾಪಕ ಡಾ.ಸಿದ್ದರಾಜು. ಶೈಲಾ ನಾಗರಾಜು, ತುಮಕೂರು ವಿವಿ ಡೀನ್ ಡಾ.ಎಲ್.ಪಿ.ರಾಜು, ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.