ಒಂದೇ ಕುಟುಂಬದ 7 ಮಂದಿಯ ದಹಿಸಿದ ಪ್ರಕರಣ: ಗಲ್ಲು ಶಿಕ್ಷೆಗೊಳಗಾದ ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕಾರ

Update: 2018-06-03 18:06 GMT

ಹೊಸದಿಲ್ಲಿ, ಜೂ. 3: ಎಮ್ಮೆ ಕಳವಿಗೆ ಸಂಬಂಧಿಸಿ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ವ್ಯಕ್ತಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ. ಇದು ಅವರು ತಿರಸ್ಕರಿಸುತ್ತಿರುವ ಮೊದಲ ಕ್ಷಮಾದಾನ ಅರ್ಜಿಯಾಗಿದೆ.

2006ರಲ್ಲಿ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ಬ್ಲಾಕ್‌ನಲ್ಲಿ ವಿಜೇಂದ್ರ ಮಹತೋ ಹಾಗೂ ಆತನ ಕುಟುಂಬದ ಐವರನ್ನು ಜಗತ್ ರೈ ಬೆಂಕಿ ಹಚ್ಚಿ ಭೀಬತ್ಸವಾಗಿ ಹತ್ಯೆಗೈದಿದ್ದ.

2005ರಲ್ಲಿ ಎಮ್ಮೆ ಕಳುವುಗೈದ ಹಿನ್ನೆಲೆಯಲ್ಲಿ ಜಗತ್ ರೈ, ವಝೀರ್ ರೈ, ಅಜಯ್ ರೈ ವಿರುದ್ಧ ಮಹತೋ ದೂರು ದಾಖಲಿಸಿದ್ದರು. ಪ್ರಕರಣ ಹಿಂದೆ ತೆಗೆಯುವಂತೆ ಆರೋಪಿಗಳು ಮಹತೋ ಅವರ ಮೇಲೆ ಒತ್ತಡ ಹೇರಿದ್ದರು. ಆದರೆ, ಮಹತೋ ನಿರಾಕರಿಸಿದ್ದರು. ಇದರಿಂದ ಕ್ರೋಧಕೊಂಡ ರೈ ಮಹತೋ ಅವರ ಮನೆಗೆ ಬೆಂಕಿ ಹಚ್ಚಿದ್ದ. ಇದರ ಪರಿಣಾಮ ಮಹತೋ, ಅವರ ಪತ್ನಿ ಹಾಗೂ ಐವರು ಮಕ್ಕಳ ಸಜೀವವಾಗಿ ದಹನವಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯ ಜಗತ್ ರೈಗೆ ಮರಣ ದಂಡನೆ ವಿಧಿಸಿತ್ತು. 2013ರಲ್ಲಿ ಸುಪ್ರೀಂ ಕೋರ್ಟ್ ಕೂಡ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಜಗತ್ ರೈ ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News