×
Ad

ನ್ಯಾಯಮೂರ್ತಿಗಳ ಸ್ಥಾನಕ್ಕೆ ಎಲ್ಲ ಸಮುದಾಯಗಳ ವಕೀಲರನ್ನು ಪರಿಗಣಿಸಬೇಕು: ಎ.ಪಿ.ರಂಗನಾಥ್

Update: 2018-06-04 22:37 IST

ಬೆಂಗಳೂರು, ಜೂ.4: ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು ಮಾಡುವಾಗ ಹೈಕೋರ್ಟ್ ಕೊಲಿಜಿಯಂ ಎಲ್ಲ ಸಮುದಾಯಗಳ ವಕೀಲರನ್ನು ಪರಿಗಣಿಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಅ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದ್ದಾರೆ.

ಸೋಮವಾರ ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ನೂತನ ನ್ಯಾಯಮೂರ್ತಿಗಳಾದ ಎಚ್.ಟಿ.ನರೇಂದ್ರ ಪ್ರಸಾದ್ ಹಾಗೂ ಪಿ.ಎಂ.ನವಾಝ್ ಅವರಿಗೆ ಸಂಘದ ವತಿಯಿಂದ ಸೋಮಚಾರ ನೀಡಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಸಮುದಾಯ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಹೊಂದುವುದಾಗಲೀ ಅಥವಾ ಪ್ರಾತಿನಿಧ್ಯವೇ ಇಲ್ಲದಂತೆ ಅವಗಣನೆಗೆ ಒಳಗಾಗುವುದಾಗಲೀ ಸಲ್ಲದು ಎಂದು ರಂಗನಾಥ್ ಹೇಳಿದರು.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮಾತನಾಡಿ, ನಮ್ಮ ನಿರೀಕ್ಷೆಗೂ ಮೀರಿದ ವೇಗದಲ್ಲಿ ಕೆಲವು ಸಂಗತಿಗಳು ಜರುಗುತ್ತಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಹೊಸ ನ್ಯಾಯಮೂರ್ತಿಗಳ ನೇಮಕ ಆಗಿದೆ ಎಂದರು.

ರಾಜ್ಯ ಹೈಕೋರ್ಟ್‌ಗೆ ತನ್ನದೇ ಆದ ಸಂಪ್ರದಾಯವಿದೆ. ಇಲ್ಲಿನ ಶಿಸ್ತು, ಘನತೆ ಅಪರೂಪದ್ದಾಗಿದೆ. ಇಲ್ಲಿನ ವಕೀಲರ ವೃತ್ತಿ ಬದ್ಧತೆ ಶ್ಲಾಘನೀಯ. ನಾನು ಇಲ್ಲಿ ಮುಖ್ಯ ನ್ಯಾಯಮೂರ್ತಿ ಆಗಿರುವುದು ಸಂತೋಷದ ಸಂಗತಿ ಎಂದರು.

ಉತ್ತಮ ನ್ಯಾಯಮೂರ್ತಿಗಳಿಗೆ ವಕೀಲರ ಸಂಘವೇ ತವರು ಮನೆ ಇದ್ದಂತೆ. ಇಲ್ಲಿ ಸಾಕಷ್ಟು ಬುದ್ಧಿವಂತ ವಕೀಲರಿದ್ದಾರೆ ಎಂದರು.
ನ್ಯಾಯಮೂರ್ತಿಗಳಾದ ಆರ್.ದೇವದಾಸ್, ಸುನೀಲ್ ದತ್ ಯಾದವ್, ಸುಧೀಂದ್ರ ರಾವ್, ಆರ್.ಎಸ್.ಚೌಹಾಣ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಗಂಗಾಧರಯ್ಯ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News