ಜೂ.7ರಿಂದ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ರಿಯಾಯಿತಿ ಬಸ್ ಪಾಸ್ ವಿತರಣೆ
ಬೆಂಗಳೂರು, ಜೂ. 4: ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) 2018-19ನೆ ಸಾಲಿನಲ್ಲಿ (1ರಿಂದ 10ನೇ ತರಗತಿ) ಶಾಲಾ ವಿದ್ಯಾರ್ಥಿಗಳಿಗೆ ಜೂ.7ರಿಂದ ರಿಯಾಯಿತಿ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತದೆ. ಸದರಿಯವರು ಸಂಸ್ಕರಣಾ ಶುಲ್ಕ ಹಾಗೂ ಅಪಘಾತ ಪರಿಹಾರ ನಿಧಿ(ಒಟ್ಟು 150 ರೂ.) ಮೊತ್ತವನ್ನು ಪಾವತಿಸಬೇಕಿರುತ್ತದೆ. ಈ ವರ್ಗದ ವಿದ್ಯಾರ್ಥಿಗಳು ಉಚಿತ ಬಸ್‌ಪಾಸ್ ಪಡೆಯಲು ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಬೇಕು.
ನಿಗಮದ ಎಲ್ಲ ಬಸ್ ನಿಲ್ದಾಣಗಳಲ್ಲಿ ಹಾಗೂ ನಿಗಮದ ವೆಬ್‌ಸೈಟ್‌ನಲ್ಲಿ (www.ksrtc.in) ಪಾಸ್ ಅರ್ಜಿಗಳು ಲಭ್ಯವಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಶಾಲೆಗಳಲ್ಲಿ ದೃಢೀಕರಿಸಬೇಕಿರುತ್ತದೆ. ವಿದ್ಯಾರ್ಥಿಗಳು ಅಭ್ಯಸಿಸುತ್ತಿರುವ ಶಾಲೆಗಳ ಮುಖಾಂತರ ಬಸ್ ಪಾಸ್‌ಗಳನ್ನು ವಿತರಿಸಲಾಗುವುದು.
ವಿದ್ಯಾರ್ಥಿಗಳು ನೇರವಾಗಿ ಪಾಸ್ ಕೌಂಟರ್‌ಗೆ ಬರುವ ಅವಶ್ಯಕತೆಯಿರುವುದಿಲ್ಲ. ವಿದ್ಯಾರ್ಥಿ ವರ್ಗದವರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಅಧಿಕೃತ ಪ್ರಕಟಣೆ ಕೋರಿದೆ.