×
Ad

​ರಾಸಾಯನಿಕ ಗೊಬ್ಬರ ಬಳಕೆಯಿಂದ ದಾಳಿಂಬೆ ಬೆಳೆಗೆ ಸೊರಗು ರೋಗ

Update: 2018-06-04 23:53 IST

ತುಮಕೂರು,ಜೂ.4:ಇತ್ತೀಚಿನ ದಿನಗಳಲ್ಲಿ ರೈತರು ಸಾವಯವ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ರಾಸಾಯನಿಕ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ದಾಳಿಂಬೆ ಬೆಳೆಗೆ ಸೊರಗು ರೋಗ ಉಂಟಾಗುತ್ತಿದೆ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಮ್.ಆರ್.ದಿನೇಶ್ ತಿಳಿಸಿದರು. 

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶಿರಾ ತಾಲ್ಲೂಕು ಗೋಣಿಹಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಾಳಿಂಬೆ ಬೆಳೆಯಲ್ಲಿ ಅರ್ಕಾ ಸೂಕ್ಷ್ಮ ಜೀವಾಣು ಗೊಬ್ಬರಗಳ ಬಳಕೆ ಕುರಿತ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಕೆ ಮಾಡುವುದರಿಂದ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಾಣುಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ದಾಳಿಂಬೆ  ಬೆಳವಣಿಗೆ ಕುಂಠಿತವಾಗಿ ವಿವಿಧ ಬಗೆಯ ರೋಗಗಳು ಬಾಧಿಸುತ್ತಿವೆ.ಇದರಿಂದ ರೈತರಿಗೆ ತುಂಬ ನಷ್ಟವಾಗುತ್ತಿದ್ದು, ಹತೋಟಿ ಬಹಳ ಕಠಿಣವೆನಿಸಿದೆ. ಈ ದಿಸೆಯಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ದಿಟ್ಟ ಹೆಜ್ಜೆಯನ್ನಿರಿಸಿ ಅರ್ಕಾ ಸೂಕ್ಷ್ಮ ಜೀವಾಣು ಜೈವಿಕ ಗೊಬ್ಬರವನ್ನು ಸಂಶೋಧಿಸಿ ರೈತರ ಬಳಕೆಗೆ ಬಿಡುಗಡೆ ಮಾಡಿದೆ. ಈ ಗೊಬ್ಬರದಿಂದ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಾಣು ಸಂಖ್ಯೆ ವೃದ್ಧಿಗೊಂಡು ದಾಳಿಂಬೆ ಬೆಳೆಗೆ ಬೇಕಾಗುವ ಪೋಷಕಾಂಶವನ್ನು ಪೂರೈಸುವಲ್ಲಿ ತುಂಬ ಸಹಕಾರಿಯಾಗಲಿದೆ. ರೈತ ಬಾಂಧವರು ಈ ಅರ್ಕಾ ಸೂಕ್ಷ್ಮ ಜೀವಾಣು ಜೈವಿಕ ಗೊಬ್ಬರವನ್ನು ಹೆಚ್ಚು ಹೆಚ್ಚು ಬಳಕೆ ಮಾಡಿ ಲಾಭ ಪಡೆಯಬೇಕೆಂದು ಕರೆ ನೀಡಿದರು.

ಸೊಲ್ಲಾಪುರದ ದಾಳಿಂಬೆ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಜ್ಯೋತ್ಸ್ನ ಶರ್ಮಾ ಮಾತನಾಡಿ,ದಾಳಿಂಬೆ ಬೆಳೆಯನ್ನು ಬೇರೆಲ್ಲಾ ಹಣ್ಣುಗಳಿಗೆ ಹೋಲಿಕೆ ಮಾಡಿದಾಗ ಅತಿ ಹೆಚ್ಚು ಖನಿಜಾಂಶಗಳು ಇರುವುದು ಕಂಡು ಬಂದಿದ್ದು, ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಬೆಳೆಯನ್ನು ಬೆಳೆಯಲು ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ನಮ್ಮ ಸಂಸ್ಥೆಯು ಶ್ರಮಿಸುತ್ತಿದೆ.ಅಲ್ಲದೇ ಗಿಡಕ್ಕೆ ಬೇಕಾಗುವ ಪೋಷಕಾಂಶ, ನೀರು ಮತ್ತು ತಗುಲುವ ರೋಗ,ಕೀಟಗಳಿಗೆ,ಕೀಟಗಳ ಹತೋಟಿಗೆ ಸಂಶೋಧನೆಯ ಮುಖಾಂತರ ಬಗೆಹರಿಸುವ ನಿಟ್ಟಿನಲ್ಲಿ ಸಂಸ್ಥೆಯು ಹೊಸಹೊಸ ಪ್ರಯೋಗಗಳನ್ನು ಮಾಡುತ್ತಿದೆ ಎಂದರು. 

ಮಣ್ಣು ವಿಜ್ಞಾನದ ಮುಖ್ಯಸ್ಥ ಡಾ.ಎ.ಎನ್.ಗಣೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕೃಷಿ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ.ಮಂಜುನಾಥ್,ಡಾ.ಜಿ.ಸೆಲ್ವಕುಮರ್, ಡಾ.ಎನ್.ಲೋಗಾನಂದನ್,ಡಾ.ಮಲ್ಲಿಕಾರ್ಜುನ್, ಡಾ.ಸತೀಶ್ ಪತೇಪುರ್,ಡಾ.ಎ.ಎಂ.ನದಾಫ ಹಾಗೂ 500ಕ್ಕೂ ಹೆಚ್ಚು ದಾಳಿಂಬೆ ಬೆಳೆಗಾರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News