ಪರಿಸರದ ಶೋಷಣೆ ಮನುಕುಲದ ಅವನತಿಗೆ ಕಾರಣ: ಶಾಸಕ ಸಿಟಿ ರವಿ
ಚಿಕ್ಕಮಗಳೂರು, ಜೂ.5 ಮನುಷ್ಯ ತನ್ನ ಅವಶ್ಯಕತೆಗಳಿಗೆ ಮಿತಿ ಹಾಕಿಕೊಳ್ಳಬೇಕು. ಇಲ್ಲವಾದಲ್ಲಿ ಪ್ರಕೃತಿ ಶೋಷಣೆ ಹೆಚ್ಚಾಗುತ್ತದೆ. ಮನುಕುಲದ ಅವನತಿಗೂ ಕಾರಣವಾಗುತ್ತದೆ ಎಂದು ಶಾಸಕ ಸಿ.ಟಿ.ರವಿ ಎಚ್ಚರಿಸಿದರು.
ಮಂಗಳವಾರ ನಗರದ ಎಐಟಿ ಕಾಲೇಜಿ ಬಿಜಿಎಸ್ ಸಭಾಂಗಣದಲ್ಲಿ ಕಾಲೇಜು ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಸಮಾರಂಭವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆರ್ಥಿಕ ತಜ್ಞರು ದೇಶದ ಜಿಡಿಪಿ ದರವನ್ನು ಪ್ರಾಕೃತಿಕ ಸಂಪನ್ಮೂಲ ಆಧರಿಸಿ ನಿರ್ಧರಿಸುವುದಿಲ್ಲ. ಬದಲಾಗಿ ಮಾರುಕಟ್ಟೆ ಸಾಮರ್ಥ್ಯವನ್ನು ಆಧಾರದಲ್ಲಿಟ್ಟು ನಿರ್ಧರಿಸುತ್ತಾರೆ. ಪ್ರಕೃತಿಯಲ್ಲೇ ಬದುಕಿನ ಪಾಠವಿದೆ. ಮನುಷ್ಯ ಮತ್ತು ಪ್ರಕೃತಿ ಎರಡರ ಉಳಿವಿನ ಕೊಂಡಿ ಪ್ರಕೃತಿಯಲ್ಲೇ ಇದೆ. ಮನುಷ್ಯನ ದುರಾಸೆ ಹೆಚ್ಚಾಗಿ ಪ್ರಕೃತಿ ಮೇಲಿನ ದೌರ್ಜನ್ಯ ಹೆಚ್ಚಾದರೆ ಈ ಕೊಂಡಿ ಕಳಚಿ ಬೀಳುತ್ತದೆ ಎಂದರು.
ದುರಾಸೆ ಹೆಚ್ಚಾದಂತೆಲ್ಲ ಪ್ರಕೃತಿಯ ಒಡಲು ಬಗೆದ ಪರಿಣಾಮ ಎಷ್ಟೋ ನದಿಗಳು ಕಣ್ಮರೆ ಆಗಿವೆ. ಫಾರಂ ನಂ.53 ಬಂದ ಮೇಲೆ ನದಿ ಮೂಲಗಳನ್ನು ಗ್ರಾಂಟ್ ಮಾಡಲಾಯಿತು ಎಲ್ಲೆಡೆ ಕಾಫಿ, ಭತ್ತದ ಗದ್ದೆಗಳು ಬಂದು ನದಿಗಳು ನಾಪತ್ತೆಯಾದವು ಎಂದು ವಿಷಾಧಿಸಿದರು.
ಭಾರತದ ಪರಂಪರೆಯಲ್ಲಿ ಭೂಮಿಗೆ ಕೃತಜ್ಞತೆ ಸಲ್ಲಿಸುವುದನ್ನು ಕಲಿಸಲಾಗಿದೆ. ಇದು ವಿಶ್ವದ ಬೇರೆಲ್ಲೂ ಈ ರೀತಿ ಭೂಮಿಯನ್ನು ಸ್ಮರಿಸುವ ಪದ್ಧತಿ ಇಲ್ಲ. ಭಾರತದಲ್ಲಿ ಭೂಮಿಯನ್ನು ವಿಷ್ಣುವಿನ ಪತ್ನಿಗೆ ಹೋಲಿಸಲಾಗುತ್ತದೆ. ಭೂಮಿಗೆ ನಮಸ್ಕಾರ ಮಾಡಿ ನಮ್ಮನ್ನು ಕ್ಷಮಿಸು ಎಂದು ಹೇಳಿ ಮುಂದೆ ಹೆಜ್ಜೆ ಇಡುವ ಉತ್ತಮ ಸಂಸ್ಕೃತಿಯನ್ನು ನಮ್ಮಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.
ಈಗ ನಾವು ನಾಗರೀಕರೋ? ನಮ್ಮ ಪೂರ್ವಿಕರು ನಾಗರೀಕರೋ ಎಂದು ಯೋಚಿಸಬೇಕಾಗಿದೆ. ನಾನು ಹುಟ್ಟಿ ಬೆಳೆದ ಹಳಿಯೂರಿನಲ್ಲಿ ವರ್ಷಪೂರ್ತಿ ಹರಿಯುತ್ತಿದ್ದ ಬಿರಂಜಿ ಹಳ್ಳ ಈಗ ಮಳೆಗಾಲದ ಕೆಲವು ದಿನ ಮಾತ್ರ ಸಣ್ಣಗೆ ಹರಿಯುತ್ತದೆ. ಯಗಚಿ ನದಿ ಚರಂಡಿಯಂತಾಗಿದೆ. ಮನುಷ್ಯನ ದುರಾಸೆಗೆ ಕಡಿವಾಣ ಹಾಕದಿದ್ದರೆ ಯಾರೂ ಉಳಿಯಲು ಸಾಧ್ಯವಿಲ್ಲ. ಪರಿಸರದ ಒಟ್ಟಿಗೆ ನಾವು ಬದುಕಿ, ಬದುಕಲು ಬಿಡಬೇಕು. ಆಗ ನಾವು ಬದುಕಿ, ಪ್ರಕೃತಿಯನ್ನು ಉಳಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಸಿ.ಟಿ.ಜಯದೇವ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಭೂಮಿಗೆ ನಾವು ವಿಷ ಬಿತ್ತುತ್ತಿದ್ದೇವೆ. ಅದರಿಂದ ಉತ್ಪನ್ನವಾಗುವ ವಿಷವನ್ನೇ ನಾವು ಮತ್ತೆ ಸೇವಿಸುತ್ತಿದ್ದೇವೆ. ಇದು ದುರದೃಷ್ಟಕರ. ತಂತ್ರಜ್ಞಾನ ಬೆಳೆದಂತೆ ಪಕೃತಿಯನ್ನೂ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದರು.
ಪೂರ್ವಿಕರು ಭೂಮಿಗೆ ಪೂಜ್ಯ ಸ್ಥಾನ ನೀಡಿದ್ದಾರೆ. ನಾವು ಅದರ ಮೇಲೆ ದೌರ್ಜನ್ಯ ಎಸಗಿ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದೇವೆ. ಮನುಷ್ಯನ ಅಭಿವೃದ್ಧಿ ಜೊತೆಗೆ ಪ್ರಕೃತಿ ಸಮತೋಲನವನ್ನೂ ಕಾಪಾಡಬೇಕು. ಪ್ರಕೃತಿ ಉಳಿದರೆ ನಾವು, ನೀವು ಇಲ್ಲವಾದಲ್ಲಿ ಎಲ್ಲವೂ ಶೂನ್ಯ ಎಂದು ಎಚ್ಚರಿಸಿದರು.
ನಗರಸಭೆ ಸದಸ್ಯ ತಮ್ಮಯ್ಯ, ಮಾಜಿ ಅಧ್ಯಕ್ಷೆ ಕವಿತಾ ಶೇಖರ್, ಎಐಟಿ ಆಡಳಿತ ಮಂಡಳಿ ಸದಸ್ಯ ಮೋಹನ್ ಉಪಸ್ಥಿತರಿದ್ದರು. ಉಪನ್ಯಾಸಕ ಕಿರಣ್ ಸ್ವಾಗತಿಸಿ, ವಂದಿಸಿದರು.