ಚಿಕ್ಕಮಗಳೂರು: ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಪರಿಸರ ದಿನಾಚರಣೆ
ಚಿಕ್ಕಮಗಳೂರು, ಜೂ.5: ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಮತ್ತು ಜಿಲ್ಲಾ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ಇಂದು ಜಿಲ್ಲಾ ಕಾರಾಗೃಹದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಸೆಷನ್ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಎನ್.ದೇಸಾಯಿಯವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಮಾನವನ ಬದುಕು ಆರೋಗ್ಯವಾಗಿರಲು ಪರಿಸರ ಅತೀ ಅವಶ್ಯಕ. ಸುಂದರವಾದ ಪರಿಸರದಿಂದ ಸುಂದರವಾದ ಬದುಕು ನಮ್ಮದಾಗುವುದು. ಆ ಕಾರಣ ನಾವೆಲ್ಲರೂ ಪರಿಸರ ಕಾಳಜಿಯನ್ನು ಅವಶ್ಯಕವಾಗಿ ಮಾಡಬೇಕಾಗಿದೆ. ಪರಿಸರಕ್ಕೆ ಧಕ್ಕೆ ತರುವ, ಹಾನಿಯುಂಟುಮಾಡುವ ಕೃತ್ಯಗಳಿಂದ ದೂರವಾಗಿರಬೇಕು. ಇಂದು ಪರಿಸರದ ವಿದ್ಯಮಾನಗಳು ಮಾನವನನ್ನು ವಿನಾಶದ ಕಡೆಗೆ ಕರೆದೊಯ್ಯುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರವನ್ನು ಉಳಿಸಿ, ಬೆಳಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿ.ಕೆ.ಭಾಗ್ಯಕ್ಕ ಮಾತನಾಡುತ್ತಾ, ಇಂದು ನಾನಾ ರೀತಿಯ ಪರಿಸರ ಮಾಲಿನ್ಯವನ್ನು ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಮಾನವನ ದುರಾಸೆ, ಸ್ವಾರ್ಥ, ವಿವೇಚನಾ ರಹಿತ ಸಂಪನ್ಮೂಲಗಳ ಬಳಕೆ ಕಾರಣವೆನಿಸಿದರೂ ಇದರ ಮೂಲ ಮಾನವನ ಮನಸ್ಸಿನ ಮಲಿನತೆ. ಮಾನವ ಪ್ರಕೃತಿಯ ಕೂಸು ನಿಜ. ಪ್ರಕೃತಿಯ ಸಂಪತ್ತನ್ನು ಬಳಸಿಕೊಂಡು ಬೆಳೆಯಬೇಕು. ಆದರೆ ಏನಾಗುತ್ತಿದೆ. ಪರಿಸರವನ್ನು ಬಲಿಕೊಟ್ಟು ಬೆಳೆಯುತ್ತಿದ್ದಾನೆ. ಇದು ನಮ್ಮನ್ನು ನಾವೇ ಅಂತ್ಯಗೊಳಿಸಿಕೊಳ್ಳುವತ್ತ ನಡೆಯುತ್ತಿದ್ದೇವೆ ಎಂದರೆ ತಪ್ಪಾಗದು. ಅದರಿಂದ ಇಂದು ಭೂಮಿಯನ್ನು ಹಸಿರುಗೊಳಿಸುವ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅವಶ್ಯಕತೆ ಹಿಂದಿಗಿಂತ ಇಂದು ಹೆಚ್ಚಾಗಿದೆ. ಈ ದಿಶೆಯಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ಆಶಿಸಿದರು.
ಕಾರಾಗೃಹದ ಆವರಣದಲ್ಲಿ ಹಣ್ಣಿನ ಗಿಡಗಳನ್ನು ಜಿಲ್ಲಾ ನ್ಯಾಯಾಧೀಶರು ಮತ್ತು ಅತಿಥಿಗಳು ನೆಟ್ಟು ನೀರುಣಿಸಿದರು.
ಕಾರ್ಯಕ್ರಮದಲ್ಲಿ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಬಸವರಾಜು ಚೆಂಗಟಿ, ನ್ಯಾವವಾದಿಗಳು, ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಎಸ್.ಎಸ್.ವೆಂದಟೇಶ್, ಜೈಲು ಅಧೀಕ್ಷಕ ವಿಜಯಕುಮಾರ್ ಚೌವ್ಹಾಣ್, ಜೈಲು ಸಿಬ್ಭಂಧಿ, ಉಪನ್ಯಾಸಕ ಸಿ.ಹೆಚ್.ನಾಗರಾಜ್, ಹಾಗು ಬ್ರಹ್ಮಾಕುಮಾರೀಸ್ ಸದಸ್ಯರು, ಎಸ್‍ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿದ್ಯಾಲಯ ಉಜಿರೆಯ ವೈಧ್ಯ ವಿದ್ಯಾರ್ಥಿಗಳಾದ ಸೌಜನ್ಯ, ಅನಿತ ಭಾಗವಹಿಸಿದ್ದರು.