ಮೂಡಿಗೆರೆ: ಕುನ್ನಹಳ್ಳಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳೇ ಕಾರಣ; ಆರೋಪ
ಮೂಡಿಗೆರೆ, ಜೂ.5: ಹಳೇಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಕುನ್ನಹಳ್ಳಿ ಗ್ರಾಮದ ಹೊಸನಗರ, ಅಂಬೇಡ್ಕರ್ ನಗರ, ಕೃಷ್ಣಪ್ಪನಗರ, ಕೆಲ್ಲೂರು, ಜಿ.ಕೆಲ್ಲೂರು ಗಿರಿಜನ ಕಾಲೋನಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಗ್ರಾಪಂ ಸದಸ್ಯ ಕೆ.ಟಿ.ಪೂವಪ್ಪ, ಗ್ರಾಪಂ ಉಪಾಧ್ಯಕ್ಷ ಕೆ.ಆರ್.ಶಿವಾನಂದ ಹಾಗೂ ಸ್ಥಳೀಯರಾದ ವಸಂತ ಹೊಸನಗರ, ಆನಂದ ಕೆಲ್ಲೂರು, ಉಮೇಶ್, ಸುರೇಶ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ಅವರು ತಾಲೂಕಿನ ಸಮಗ್ರ ಗಿರಿಜನ ಅಭಿವೃದ್ಧಿಗಾಗಿ ರೂ.10 ಕೋಟಿ ಅನುದಾನ ನೀಡಿದ್ದಾರೆ. ಆದರೆ ಆ ಯೋಜನೆಯಡಿ ಕಾಮಗಾರಿಗಳು ನಡೆದಿಲ್ಲ. ಅನುದಾನ ನೀಡದಿರುವುದು ಈಗ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ. ಗ್ರಾಮಕ್ಕೆ ಸುಂಡೇಕೆರೆ ಹಳ್ಳದಿಂದ ನೀರು ಒದಗಿಸಲಾಗುತ್ತಿದೆ. ಈ ಸುಂಡೇಕೆರೆ ಹಳ್ಳಕ್ಕೆ ಪಟ್ಟಣದಿಂದ ಹರಿದು ಬರುವ ಕೊಳಚೆ ನೀರು, ಸ್ಮಶಾನದ ಭೂದಿಯುಕ್ತ ನೀರು, ಬಟ್ಟೆ ತೊಳೆದ ನೀರು ಮಿಶ್ರಿತವಾಗಿ ಈ ನೀರನ್ನೇ ಸರಬರಾಜು ಮಾಡಲಾಗುತ್ತಿರುವುದರಿಂದ ಗ್ರಾಮಸ್ಥರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವಲ್ಲಿ ಶೀಘ್ರವೇ ಬೋರ್‍ವೆಲ್ ಕೊರೆಯಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಮೂಡಿಗೆರೆ ತಾಲೂಕು ಕಚೇರಿ ಹಾಗೂ ಚಿಕ್ಕಮಗಳೂರಿನಲ್ಲಿರುವ ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ಕಚೇರಿ ಎದುರು ನ್ಯಾಯಕ್ಕಾಗಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.