ರಾಜ್ಯದಲ್ಲಿ ಅಧಿಕಾರಿಗಳ ದರ್ಬಾರ್ ಜೋರಾಗಿದೆ: ಕೆ.ಎಸ್.ಈಶ್ವರಪ್ಪ

Update: 2018-06-05 17:52 GMT

ಶಿವಮೊಗ್ಗ, ಜೂ. 8: 'ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ಹಲವು ದಿನಗಳಾದರೂ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿಲ್ಲ. ಇದರಿಂದ ಆಡಳಿತ ವ್ಯವಸ್ಥೆ ಅಸ್ತವ್ಯಸ್ತವಾಗುವಂತಾಗಿದೆ. ಅಧಿಕಾರಿಗಳ ದರ್ಬಾರ್ ಜೋರಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರ್ವೇಸಾಮಾನ್ಯವಾಗಿ ಸಿಎಂ ಅಧಿಕಾರ ಸ್ವೀಕರಿಸಿದ ದಿನ ಅಥವಾ ಒಂದೆರೆಡು ದಿನಗಳ ಅಂತರದಲ್ಲಿ ಸಚಿವ ಸಂಪುಟ ರಚನೆಯಾಗುತ್ತದೆ. ಆದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನವಾದರೂ ಸಂಪುಟ ರಚನೆಯಾಗದಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ನಾಗರಿಕರಿಗೆ ಆಘಾತ ಉಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ. 

ಪ್ರಸ್ತುತ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಸ್ಥಿತಿ ಆವರಿಸಿದೆ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಸ್ಪೀಕರ್ ಕಚೇರಿಯಲ್ಲಿ ನಿಯಮಾವಳಿ ಉಲ್ಲಂಘಿಸಿ ನಿರಂತರವಾಗಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಆಡಳಿತದಲ್ಲಿ ಹೇಳುವವರು ಕೇಳುವವರ್ಯಾರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅತಂತ್ರ: ಸಚಿವ ಸಂಪುಟ ರಚನೆಯಾದರೆ ಸರ್ಕಾರಕ್ಕೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದೆ. ಎರಡೂ ಪಕ್ಷಗಳಲ್ಲಿಯೂ ಭಿನ್ನಮತ ಸ್ಪೋಟಗೊಳ್ಳುವುದು ನಿಶ್ಚಿತವಾಗಿದೆ. ಸಂಪುಟ ರಚನೆಯಾದ ನಂತರ ಕಾಂಗ್ರೆಸ್‍ನಲ್ಲಿ ಎಷ್ಟು ಜನ ಉಳಿಯುತ್ತಾರೆ ಎಂಬುವುದು ಆ ಪಕ್ಷದವರೇ ಗೊತ್ತಿಲ್ಲ ಎಂದರು.

ರಾಜ್ಯದಲ್ಲಿ ವೀರಶೈವ- ಲಿಂಗಾಯಿತ ಗೊಂದಲವಿರಲಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈ ಗೊಂದಲ ಸೃಷ್ಟಿ ಮಾಡಿದರು. ಅನೇಕ ಸ್ವಾಮೀಜಿಗಳನ್ನು ತಮ್ಮ ರಾಜಕೀಯ ದಾಳಕ್ಕೆ ಬಳಸಿಕೊಳ್ಳಲು ಮುಂದಾದರು. ಬಸವರಾಜ ಹೊರಟ್ಟಿಯವರು ಕೂಡ ಇದೇ ಹಾದಿಯಲ್ಲಿ ಮುನ್ನಡೆದರು. ಸಾಧು-ಸಂತರನ್ನು ಬೀದಿಗೆ ಇಳಿಸಿದ ಸಿದ್ದರಾಮಯ್ಯ ಹಾಗೂ ಹೊರಟ್ಟಿಯವರು ರಾಜ್ಯದ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು. 

ಬಿಜೆಪಿ ಅತ್ಯದಿಕ ಸ್ಥಾನ ಪಡೆದುಕೊಂಡಿದ್ದರೂ ಕಾಂಗ್ರೆಸ್ - ಜೆಡಿಎಸ್ ಅಪವಿತ್ರ ಮೈತ್ರಿ ಕಾರಣದಿಂದ ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ. ಈ ಸಮ್ಮಿಶ್ರ ಸರ್ಕಾರದ ಆಡಳಿತ ಎಲ್ಲಿಯವರೆಗೂ ಮುನ್ನಡೆಯಲಿದೆ ಎಂಬುವುದನ್ನು ನೋಡೋಣ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News