ಪ್ರಸ್ತುತ ಪರಿಸ್ಥಿತಿಯಲ್ಲಿ ತ್ಯಾಗ ಮನೋಭಾವ ಬೇಕು: ಸಚಿವ ಸ್ಥಾನಕಾಂಕ್ಷಿಗಳಿಗೆ ಬಸವರಾಜ ಹೊರಟ್ಟಿ ಸಲಹೆ

Update: 2018-06-05 17:55 GMT

ಮಂಡ್ಯ, ಜೂ.5: ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ತ್ಯಾಗ ಮಾಡಬೇಕಾಗಿದೆ. ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಈಗಾಗಲೇ ಹೇಳಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರವಾಗಿ ಮತಯಾಚಿಸುವ ಸಂಬಂಧ ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇರುವ ಕಡಿಮೆ ಸ್ಥಾನಗಳಲ್ಲಿ ಎಲ್ಲರೂ ನಮಗೆ ಬೇಕು ಎನ್ನುವುದು ಸರಿಯಲ್ಲ. ತ್ಯಾಗ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದರು.

ಜೆಡಿಎಸ್‍ನಿಂದ 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನವಿಲ್ಲ ಎನ್ನುವ ಪಕ್ಷದ ತೀರ್ಮಾನಕ್ಕೆ ನಾನು ತಲೆಬಾಗಿದ್ದೇನೆ. ಯಾರೇ ಸಚಿವರಾದರೂ ಸಂಪೂರ್ಣ ಸಹಕಾರವಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ವಿಧಾನಪರಿಷತ್‍ನಲ್ಲಿ ತಮಗೆ ಸಭಾಪತಿ ಸ್ಥಾನ ನೀಡುವ ಕುರಿತು ಮಾತುಗಳು ಕೇಳಲಾರಂಭಿಸಿವೆ. ಆದರೆ, ಅದು ನನಗಿಷ್ಟವಿಲ್ಲದ ಹುದ್ದೆ. ಹಾಗೊಮ್ಮೆ ಪಕ್ಷ ಸೂಚಿಸಿದರೆ ಆ ಜವಾಬ್ದಾರಿ ನಿರ್ವಹಿಸುವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಶಿಕ್ಷಕರ ಸಮಸ್ಯೆ ನಿರ್ಲಕ್ಷ್ಯ: 
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ  ಆಡಳಿತಾವಧಿಯಲ್ಲಿ ಶಿಕ್ಷಕರ ಸಮಸ್ಯೆ ಹಾಗೂ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಶಿಕ್ಷಣ ಕ್ಷೇತ್ರದ ಬಗ್ಗೆ ಗೊತ್ತಿಲ್ಲದವರನ್ನು ಸಚಿವರನ್ನಾಗಿ ಮಾಡಿದ್ದು, ರಾಜ್ಯದ ಇನ್ನೊಂದು ದುರಂತವಾಗಿತ್ತು ಎಂದು ಹೊರಟ್ಟಿ ಆರೋಪಿಸಿದರು.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ತಾವು ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲಾಗಿತ್ತು. ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ನಾನು ಇಬ್ಬರೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೆವು ಎಂದು ಅವರು ಹೇಳಿದರು.

ಪ್ರಸ್ತುತ ನಮ್ಮ ಸರಕಾರವಿದ್ದು, ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಲಿದೆ. ಈಗಾಗಲೇ ಮೂರು ಬಾರಿ ಆಯ್ಕೆಯಾಗಿ ತಮ್ಮದೇ ಛಾಪು ಮೂಡಿಸಿರುವ ಮರಿತಿಬ್ಬೇಗೌಡರಿಗೆ ಈ ಚುನಾವಣೆಯಲ್ಲೂ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆಮಾಡಬೇಕು ಎಂದು ಅವರು ಮನವಿ ಮಾಡಿದರು.

ಎಂಎಲ್‍ಸಿಗಳಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಮರಿತಿಬ್ಬೇಗೌಡ, ಚೌಡರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News