ತುಮಕೂರು: 723 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ

Update: 2018-06-06 12:20 GMT

ತುಮಕೂರು,ಜೂ.6: ರಾಜ್ಯದಲ್ಲಿಯೇ ಪ್ರಥಮವಾಗಿ ನೇರ ನೇಮಕಾತಿ ಹಾಗೂ ನೇರ ಪಾವತಿ ಕಾರ್ಯಕ್ರಮದಡಿ ಜಿಲ್ಲೆಯ ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 723 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶಗಳನ್ನು ಇಂದು ಜಿಲ್ಲಾಧಿಕಾರಿ ಡಾ:ಆರ್.ವಿಶಾಲ್ ವಿತರಿಸಿದರು. 

ತುಮಕೂರು ನಗರದಲ್ಲಿರುವ ಗಾಜಿನ ಮನೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಆಯೋಜಿಸಿದ್ದ ನೇಮಕಾತಿ ಆದೇಶ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಾಡಳಿತದ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ನೇರ ನೇಮಕಾತಿ ಹಾಗೂ ನೇರ ಪಾವತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಅದೇ ಯೋಜನೆಯನ್ನು ತುಮಕೂರು ಜಿಲ್ಲಾಧಿಕಾರಿಯಾಗಿ ರಾಜ್ಯದಲ್ಲಿಯೇ ಪ್ರಥಮವಾಗಿ ಅನುಷ್ಟಾನಗೊಳಿಸಿ, 723 ಮಂದಿಗೆ ಆದೇಶಗಳನ್ನು ವಿತರಿಸಲಾಗುತ್ತಿದೆ. ಕ್ರಿಯೆ ಮತ್ತು ಮನಸ್ಸು ಎರಡು ಬೇಕು. ನೀವು ಕೆಲಸ ಮಾಡಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಓದಿಸಿ, ಸಂಘಟಿಸಿ ಹಾಗೂ ಹೋರಾಡಿ, ಆದರೆ ಮೊದಲಿಗೆ ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣವನ್ನು ಕೊಡಿಸಿ ಎಂದು  ಕರೆ ನೀಡಿದರು. 

ವಿದೇಶಗಳಲ್ಲಿ ವ್ಯಾಸಂಗ ಮಾಡಲು ಸರಕಾರದ ವತಿಯಿಂದ 40 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ನೇರನೇಮಕಾತಿ ಆದೇಶ ಪಡೆದವರಿಗೆ ಮಾಸಿಕ 20 ಸಾವಿರ ವೇತನ ಸಿಗಲಿದ್ದು, ನೇರ ಪಾವತಿ ಯೋಜನೆಯಡಿ ಆದೇಶ ಪಡೆದ ಪೌರ ಕಾರ್ಮಿಕರಿಗೆ ಇಎಸ್‍ಐ ಹಾಗೂ ಪಿಎಫ್ ಸೌಲಭ್ಯದ ಜೊತೆಯಲ್ಲಿ 17 ಸಾವಿರದಿಂದ 18 ಸಾವಿರ ಸಂಭಾವನೆ ದೊರೆಯಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಈಗಾಗಲೇ 500 ಮಂದಿ ಪೌರ ಕಾರ್ಮಿಕರು ಸಿಂಗಾಪುರಕ್ಕೆ ತೆರಳಿ, ಆ ದೇಶದಲ್ಲಿ ಅಳವಡಿಸಿಕೊಂಡಿರುವ ವ್ಯವಸ್ಥೆಯನ್ನು ನೋಡಿದ್ದಾರೆ. ಇದೀಗ ನೇಮಕಾತಿ ಆದೇಶ ಪಡೆದ ಪೌರಕಾರ್ಮಿಕರಲ್ಲೂ ಸಿಂಗಾಪುರಕ್ಕೆ ತೆರಳಲು ಅವಕಾಶವಿದೆ. ಇದರಿಂದ ಪೌರಕಾರ್ಮಿಕರ ದೃಷ್ಟಿಕೋನ ಬದಲಾಗಲಿದೆ. ಪೌರಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ನೀವು ಹಾಗೂ ನಿಮ್ಮ ಕುಟುಂಬದ ಸದಸ್ಯರು ವಾಕ್ಸಿನ್ ಹಾಕಿಸಿಕೊಳ್ಳಿ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಕುಡಿತ ಬೇಡ ಎಂದು ಸಲಹೆ ನೀಡಿದ ಅವರು, ಬಿ.ಕೆ.ಪವಿತ್ರ ಪ್ರಕರಣದನ್ವಯ ಪೌರಾಡಳಿತ ನಿರ್ದೇಶನಾಲಯದಲ್ಲಿ ಯಾರಿಗೂ ಹಿಂಬಡ್ತಿಯಾಗದಂತೆ ನ್ಯಾಯ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇನೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ನಟರಾಜ್, ಸಫಾಯಿ ಕರ್ಮಚಾರಿಗಳಿಗಾಗಿ ಆಯೋಗದ ವತಿಯಿಂದ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಸಫಾಯಿ ಕರ್ಮಚಾರಿಗಳು ವಾಸಿಸುವ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ, ಶುದ್ಧ ಕುಡಿಯುವ ನೀರು, ಅಂಗನವಾಡಿ ಕೇಂದ್ರ, ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು. 

ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರತಿಷ್ಠಿತ ಖಾಸಗಿ ಶಾಲೆಗಳು ಹಾಗೂ ವಸತಿ ಶಾಲೆಗಳಲ್ಲಿ ನೊಂದಾಯಿಸಲು ಆರ್ಥಿಕ ನೆರವು ನೀಡಲಿದೆ. ಆದ್ದರಿಂದ ದಯವಿಟ್ಟು ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಅವರು ಮನವಿ ಮಾಡಿದರು. 

ಸಮಾರಂಭದಲ್ಲಿ ಮಹಾನಗರಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ, ಜಿಲ್ಲಾ ನಗರ ಯೋಜನಾ ನಿರ್ದೇಶಕಿ ಅನುಪಮಾ,ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ದೇವರಾಜಯ್ಯ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News