ಬಿಜೆಪಿಗಿದು ಶೋಭೆಯೆ?

Update: 2018-06-07 03:56 GMT

ಹೆಣ ಬಿದ್ದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಇರುತ್ತಾರೆ ಎನ್ನುವುದು ಕರಾವಳಿಯ ಇತ್ತೀಚಿನ ಆಡುಮಾತು. ಹೆಣ ರಾಜಕಾರಣದ ಮೂಲಕವೇ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಚಲಾವಣೆಯಲ್ಲಿರುವ ಬಿಜೆಪಿಯ ನಾಯಕಿ ಈಕೆ. ಬದುಕಿದವರ ಹೆಸರನ್ನೂ ಸತ್ತವರ ಪಟ್ಟಿಗೆ ಹಾಕಿ ‘‘ಹಿಂದೂಗಳ ಕೊಲೆಯಾಗುತ್ತಿದೆ. ಎನ್‌ಐಎ ತನಿಖೆಯಾಗಲಿ’ ಎಂದು ಒತ್ತಾಯಿಸಿದ್ದ ಸಂಸದೆ, ನೀರಿಗೆ ಬಿದ್ದು ಅನುಮಾನಾಸ್ಪದವಾಗಿ ಸತ್ತ ವ್ಯಕ್ತಿಯೊಬ್ಬನನ್ನು ಮುಂದಿಟ್ಟುಕೊಂಡು, ಕಾರವಾರದಲ್ಲಿ ಇನ್ನಷ್ಟು ಹೆಣಗಳನ್ನು ಬೀಳಿಸಲು ಶಕ್ತಿ ಮೀರಿ ಶ್ರಮಿಸಿದ್ದರು. ಸಂಸದೆಯಾದ ಬಳಿಕ ಒಮ್ಮೆಯೂ ಉಡುಪಿಯ ಕಡೆ ತಿರುಗಿ ನೋಡದ ಶೋಭಾ ಇದೀಗ ಕೆಲವು ನಾಯಕರ ಜೊತೆಗೆ ಉಡುಪಿಯತ್ತ ದಾವಿಸಿ ಗದ್ದಲ ಎಬ್ಬಿಸುತ್ತಿದ್ದಾರೆ. ಅಂದ ಹಾಗೆ ಈ ಬಾರಿ ಯಾವುದೇ ಹಿಂದೂ ಹೆಸರಿನ ವ್ಯಕ್ತಿಯ ಹತ್ಯೆಯಾಗಿಲ್ಲ.

ಬದಲಿಗೆ ಹುಸೇನಬ್ಬ ಎನ್ನುವ ದನದ ವ್ಯಾಪಾರಿಯೊಬ್ಬರ ಹತ್ಯೆಗೆ ಸಂಬಂಧಿಸಿ ಮೂವರು ಪೊಲೀಸರನ್ನು, ಕೆಲವು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕಳೆದ ಚುನಾವಣೆಯ ಉದ್ದಕ್ಕೂ ಕೊಲೆಗಾರರನ್ನು ಬಂಧಿಸಿ ಎಂದೆಲ್ಲ ಹುಯಿಲೆಬ್ಬಿಸಿದ್ದ ಶೋಭಾಕರಂದ್ಲಾಜೆ ಮತ್ತು ಕೆಲವು ಬಿಜೆಪಿ ಮುಖಂಡರು ಇದೀಗ ಉಡುಪಿಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಕ್ಕಾಗಿಯೇ ಪ್ರತಿಭಟನೆಗಿಳಿದಿದ್ದಾರೆ. ಜನಪ್ರತಿನಿಧಿಗಳು ಒಂದು ನಿರ್ದಿಷ್ಟ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತಮ್ಮ ಕ್ಷೇತ್ರದ ಎಲ್ಲ ವರ್ಗ, ಸಮುದಾಯದ ಜನರನ್ನು ಪ್ರತಿನಿಧಿಸುತ್ತಾರೆ. ಅವರೆಲ್ಲರಿಗಾಗಿ ಜನಪ್ರತಿನಿಧಿಗಳು ತಮ್ಮನ್ನು ಮೀಸಲಾಗಿಡಬೇಕು. ಸತ್ತವನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದರೆ ಮಾತ್ರ ಆರೋಪಿಗಳ ಬಂಧನವಾಗಬೇಕು, ಇನ್ನೊಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದರೆ ಆರೋಪಿಗಳ ಬಿಡುಗಡೆ ಮಾಡಬೇಕು ಎಂದು ಒಬ್ಬ ಸಂಸದೆಯಾಗಿ ಮಾತ್ರವಲ್ಲ, ಮನುಷ್ಯರಾಗಿ ಕೂಡ ಆ ರೀತಿ ಆಲೋಚಿಸುವುದು ಅನಾಗರಿಕವಾಗಿದೆ. ದುರದೃಷ್ಟವಶಾತ್ ಶೋಭಾ ಕರಂದ್ಲಾಜೆ ಗುಂಪು ಇದೀಗ ಅದನ್ನೇ ಮಾಡುತ್ತಿದ್ದು, ಬಹಿರಂಗವಾಗಿಯೇ ಬಿಜೆಪಿಯ ಮಾನವನ್ನು ಹರಾಜು ಹಾಕುತ್ತಿದ್ದಾರೆ. ಉಡುಪಿಯಲ್ಲಿ ನಡೆದ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಬೇಕಾದುದು.

ಒಂದು ವೇಳೆ ಇದು ರಾಜಸ್ಥಾನ, ಹರ್ಯಾಣದಂತಹ ರಾಜ್ಯಗಳಲ್ಲಿ ಈ ಘಟನೆ ನಡೆದಿದ್ದರೆ ದೇಶ ವಿದೇಶಗಳಲ್ಲಿ ಚರ್ಚೆಯಾಗಿ ಬಿಡುತ್ತಿತ್ತು. ರಾಷ್ಟ್ರೀಯ ಚಾನೆಲ್‌ಗಳು 24 ಗಂಟೆ ಇದನ್ನೇ ಚರ್ಚಿಸುತ್ತಿದ್ದವು. ರಾಜಸ್ಥಾನದಲ್ಲಿ ಓರ್ವ ವೃದ್ಧ ದನದ ವ್ಯಾಪಾರಿಯನ್ನು ಕೊಂದ ಪ್ರಕರಣಕ್ಕಿಂತಲೂ ಉಡುಪಿಯ ಪ್ರಕರಣ ಗಂಭೀರವಾದುದು. ಅಲ್ಲಿ ಸಂಘ ಪರಿವಾರದ ಕಾರ್ಯಕರ್ತರಷ್ಟೇ ನೇರ ಪಾಲುದಾರರು. ಬಳಿಕ ಆರೋಪಿಗಳನ್ನು ರಕ್ಷಿಸಲು ಪೊಲೀಸರು ಸಹಕರಿಸಿದರು. ಆದರೆ ಇಲ್ಲಿನ ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತರ ಜೊತೆಗೆ ಪೊಲೀಸರು ನೇರವಾಗಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಜೀಪಿನಲ್ಲೇ ಹೆಣವನ್ನು ಸಾಗಿಸಲಾಗಿದೆ. ಸಂಸದರು ಹೇಳುವಂತೆ, ಸಂಘಪರಿವಾರ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಪೊಲೀಸರ ವಶಕ್ಕೆ ಒಪ್ಪಿಸಿತು ಎಂದು ಇಟ್ಟುಕೊಳ್ಳೋಣ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದು ಪೊಲೀಸರ ಕರ್ತವ್ಯವಾಗಿತ್ತು. ಒಂದು ವೇಳೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದರೆ, ಮರಣೋತ್ತರ ವರದಿಯಾಧಾರದಿಂದ ಆತ ಹಲ್ಲೆಗೊಳಗಾಗಿ ಮೃತಪಟ್ಟನೋ ಇಲ್ಲ ಹೃದಯಾಘಾತದಿಂದ ಮೃತಪಟ್ಟನೋ ಎನ್ನುವುದನ್ನು ಆಧರಿಸಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಹುಸೇನಬ್ಬ ಮೃತಪಟ್ಟದ್ದು ತಿಳಿದಾಕ್ಷಣ ಪೊಲೀಸರು ಸಂಘಪರಿವಾರದ ಸಹಕಾರದಿಂದ ಅವರ ಹೆಣವನ್ನು ಹಾಡಿಯಲ್ಲಿ ಯಾಕೆ ಎಸೆದರು? ಬಳಿಕ ಹುಡುಕಾಟದ ನಾಟಕ ಯಾಕೆ ಮಾಡಿದರು? ಹತ್ಯೆಯಲ್ಲಿ ಅಥವಾ ಸಾವಿನಲ್ಲಿ ತಮ್ಮ ಪಾತ್ರವೇ ಇಲ್ಲದೆ ಇದ್ದರೆ ಪೊಲೀಸರಿಗೆ ಹೆಣವನ್ನು ಹಾಡಿಯಲ್ಲಿ ಎಸೆದು ನಾಟಕವಾಡುವ ಅಗತ್ಯವಿತ್ತೇ? ಒಂದೋ ಪೊಲೀಸರು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಜೊತೆ ಸೇರಿ ಹತ್ಯೆ ಮಾಡಿರಬೇಕು. ಅಥವಾ ಸಂಘ ಪರಿವಾರದ ಕಾರ್ಯಕರ್ತರನ್ನು ರಕ್ಷಿಸಲು ಪೊಲೀಸರು ಹೆಣವನ್ನು ಪೊಲೀಸ್ ಜೀಪಿನಲ್ಲಿ ಸಾಗಿಸಿರಬೇಕು.

ಇದೀಗ, ಹಿರಿಯ ಪೊಲೀಸ್ ಅಧಿಕಾರಿಗಳೇ ತನಿಖೆ ನಡೆಸಿ ತಮ್ಮದೇ ಸಿಬ್ಬಂದಿಯ ಪಾತ್ರವನ್ನು ಗುರುತಿಸಿ ಅವರನ್ನು ಮತ್ತು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿರುವಾಗ ಸಂಸದರು ಮತ್ತು ಕೆಲವು ಶಾಸಕರು ಬಂಧಿತರನ್ನು ಬಿಡುಗಡೆಗೊಳಿಸಲು ಒತ್ತಾಯಿಸುವುದು ಎಷ್ಟು ಸರಿ? ಆರೋಪಿಗಳೇ ತಪ್ಪೊಪ್ಪಿಕೊಂಡಿರುವಾಗ, ಜನಪ್ರತಿನಿಧಿಗಳು ಅವರ ಪರವಾಗಿ ಬೀದಿಯಲ್ಲಿ ವಕಾಲತು ಮಾಡುವ ಮೂಲಕ ಉಳಿದವರಿಗೂ ಇಂತಹ ಕೊಲೆಗಳನ್ನು ಮಾಡಲು ಪರೋಕ್ಷವಾಗಿ ಸ್ಫೂರ್ತಿ ನೀಡುತ್ತಿದ್ದಾರೆ.

ಸಂಘಪರಿವಾರ ಮತ್ತು ಬಿಜೆಪಿಯ ನಾಯಕರ ಮಾತುಗಳನ್ನು ತಲೆಯಲ್ಲಿ ತುಂಬಿಕೊಂಡ ಕಾರಣದಿಂದಲೇ ಅಮಾಯಕನೊಬ್ಬನ ಕೊಲೆಯ ಆರೋಪ ಹೊತ್ತು ಹಲವು ಹುಡುಗರು ಜೈಲು ಸೇರುವಂತಾಯಿತು. ಇದಕ್ಕೆ ಪರೋಕ್ಷವಾಗಿ, ಶೋಭಾಕರಂದ್ಲಾಜೆಯಂಥವರೂ ಹೊಣೆಗಾರರು. ಇಂದು ಆ ಹುಡುಗರ ಕುಟುಂಬಕ್ಕೆ ಸಂಸದೆ ನೆರವಾಗುತ್ತಾರೆಯೇ? ಇಷ್ಟೇ ಅಲ್ಲ, ತಮ್ಮ ಕರ್ತವ್ಯಕ್ಕೆ ದ್ರೋಹ ಬಗೆದು ಆರೋಪಿಗಳ ಜೊತೆಗೆ ಶಾಮೀಲಾದ ಪರಿಣಾಮವಾಗಿ ಇಬ್ಬರು ಪೊಲೀಸ್ ಸಿಬ್ಬಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದು ನಿಂತಿದ್ದಾರೆ. ಯಾರದೋ ರಾಜಕೀಯಕ್ಕೆ ತಮ್ಮ ಕುಟುಂಬವನ್ನು ಬಲಿಕೊಟ್ಟಿದ್ದಾರೆ. ಜೀವನ ಪೂರ್ತಿ ಕೋರ್ಟು ಕಚೇರಿ ಎಂದು ಅಲೆಯಬೇಕಾಗಿದೆ. ಇದೇ ಸಂದರ್ಭದಲ್ಲಿ ದನದ ವ್ಯಾಪಾರಿಯ ಕುಟುಂಬವೂ ಅತಂತ್ರವಾಗಿದೆ. ಇವರೆಲ್ಲರ ಕಣ್ಣೀರಿನ ಶಾಪ ಜನಪ್ರತಿನಿಧಿಗಳಿಗೆ ತಾಗದೇ ಇರುತ್ತದೆಯೇ? ಇಷ್ಟೂ ಜನರ ಕಣ್ಣೀರಿಗೆ ಸಂಸದರೇ ಪರೋಕ್ಷವಾಗಿ ಹೊಣೆಗಾರರಾದಂತಾಯಿತು.

ನಕಲಿ ಗೋರಕ್ಷಕರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯಗಳಿಗೆ ಎಚ್ಚರಿಕೆಯನ್ನು ನೀಡಿದ್ದರು. ಸ್ವತಃ ಅವರೇ ‘ಹಗಲು ಗೋರಕ್ಷಣೆಯ ವೇಷ ಧರಿಸಿ ರಾತ್ರಿಯಲ್ಲಿ ಕ್ರಿಮಿನಲ್ ಕೆಲಸಗಳನ್ನು ಮಾಡುವವರು’ ಎಂದು ನಕಲಿ ಗೋರಕ್ಷಕರನ್ನು ಟೀಕಿಸಿದ್ದರು. ಆದರೆ ಉಡುಪಿಯ ವಿಷಯದಲ್ಲಿ ಬಿಜೆಪಿಯಿಂದ ಆರಿಸಿ ಬಂದಿರುವ ಜನಪ್ರತಿನಿಧಿಗಳೇ ಈ ನಕಲಿ ಗೋರಕ್ಷಕರನ್ನು ರಕ್ಷಿಸಲು ಬೀದಿಗಿಳಿದಿದ್ದಾರೆ. ಈ ಮೂಲಕ ಅವರು ತಮ್ಮ ಕ್ಷೇತ್ರವನ್ನು ಗೂಂಡಾಗಳ, ಬೀದಿ ರೌಡಿಗಳ ಕೈಗೆ ಒಪ್ಪಿಸಲು ಹೊರಟಿದ್ದಾರೆ. ಪೊಲೀಸರು ರೌಡಿಗಳನ್ನು, ಕೊಲೆ ಆರೋಪಿಗಳನ್ನು ಬಂಧಿಸಬಾರದು ಎಂದ ಮೇಲೆ ಪೊಲೀಸ್ ಠಾಣೆಗಳೇಕೆ ಇರಬೇಕು? ತಮ್ಮ ಕ್ಷೇತ್ರದಲ್ಲಿ ಪೊಲೀಸ್ ಠಾಣೆಗಳ ಅಗತ್ಯವಿಲ್ಲ ಎಂದು ಹೋರಾಟ ನಡೆಸಲಿ.

ಅಧಿಕೃತವಾಗಿಯೇ ಉಡುಪಿಯ ಭದ್ರತೆಯನ್ನು ಸಂಘಪರಿವಾರದಲ್ಲಿರುವ ರೌಡಿಶೀಟರ್‌ಗಳ ಕೈಗೆ ಕೊಡಲಿ. ಯಾರನ್ನು ಬಂಧಿಸಬೇಕು, ಬಂಧಿಸಬಾರದು ಎನ್ನುವುದನ್ನು ಸಂಸದೆಯೇ ನಿರ್ಣಯಿಸಲಿ. ಯಾರನ್ನು ಕೊಲ್ಲಬಹುದು, ಕೊಲ್ಲಬಾರದು, ಯಾರಿಗೆ ಕೊಲ್ಲುವ ಅಧಿಕಾರವಿದೆ, ಅಧಿಕಾರವಿಲ್ಲ ಎನ್ನುವ ಪಟ್ಟಿಯನ್ನು ಮಾಡಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ. ಅದಕ್ಕಾಗಿ ದೇಶದ ಗೃಹ ಸಚಿವರಿಗೆ ಅವರು ತಕ್ಷಣ ಬಹಿರಂಗ ಪತ್ರವನ್ನು ಬರೆಯಲಿ. ಪೊಲೀಸರಿದ್ದೂ ಅವರು ಸಂಘಪರಿವಾರ ಹೇಳಿದಂತೆ ಕೆಲಸ ಮಾಡಬೇಕೆಂದಾದರೆ, ಸಂಘಪರಿವಾರವೇ ನೆರವಾಗಿ ಪೊಲೀಸರ ಜಾಗದಲ್ಲಿ ಕೂರುವುದು ಒಳಿತಲ್ಲವೆ? ಕನಿಷ್ಟ ಪೊಲೀಸರಿಗೆ ಸರಕಾರ ನೀಡುವ ವೇತನವಾದರೂ ಉಳಿತಾಯವಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News