ಹುಸೈನಬ್ಬ ಸಾವು ಪ್ರಕರಣವನ್ನು ಆರೆಸ್ಸೆಸ್ ತಲೆಗೆ ಕಟ್ಟುವ ಹುನ್ನಾರ: ಶೋಭಾ ಕರಂದ್ಲಾಜೆ
ಬೆಂಗಳೂರು, ಜೂ.7: ಉಡುಪಿಯ ಪೆರ್ಡೂರಿನ ಹುಸೈನಬ್ಬ ಸಾವಿನ ಪ್ರಕರಣವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಸಂಘಪರಿವಾರದ ತಲೆಗೆ ಕಟ್ಟಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವು ಸಾಗಾಣೆ ಮಾಡುತ್ತಿದ್ದ ಆರೋಪದಡಿ ಹುಸೈನಬ್ಬರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಎಫ್‌ಎಸ್‌ಎಲ್ ವರದಿ ಬರುವ ಮೊದಲೆ ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಹೊರಟಿದ್ದಾರೆ ಎಂದು ಟೀಕೆ ಮಾಡಿದರು.
ಮೃತಪಟ್ಟಿರುವ ಹುಸೈನಬ್ಬರಿಗೆ ಈ ಮೊದಲೇ ಮೂರು ಶಸ್ತ್ರಚಿಕಿತ್ಸೆ ಆಗಿದೆ. ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಗೋವುಗಳನ್ನು ಸಾಗಿಸುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದು, ಪೊಲೀಸ್ ವಾಹನದಲ್ಲಿ ಹೋಗುವಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆಯಿದೆ. ಈ ಸಾವು ಪ್ರಕರಣದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಪಾತ್ರವಿಲ್ಲವೆಂದು ಅವರು ಹೇಳಿದರು.
ಹಿಂದೂ ಕಾರ್ಯಕರ್ತರಿಗೆ ಕಿರುಕುಳ: ಹಿಂದೂ ಸಮುದಾಯದ ಮನೆಗಳಿಂದ ಗೋವುಗಳು ಕಳ್ಳತನವಾಗುತ್ತಿವೆ. ಈ ಗೋವುಗಳ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಪೊಲೀಸರ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಗೋವುಗಳನ್ನು ರಕ್ಷಿಸುವ ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ. ಆದರೂ ಈ ಹಿಂದೆ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿತ್ತು. ಈಗ ಸಮ್ಮಿಶ್ರ ಸರಕಾರದಲ್ಲೂ ಅದು ಮುಂದುವರೆದಿದೆ. ಇದ್ಯಾವುದಕ್ಕೂ ಸಂಘಪರಿವಾರ ಹೆದರುವುದಿಲ್ಲವೆಂದು ಅವರು ತಿಳಿಸಿದರು.
ಸರಕಾರದಿಂದ ತಾರತಮ್ಯ ನೀತಿ: ಕಳೆದ ವಾರ ಮಂಗಳೂರು, ಉಡುಪಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದು ಜನ ಹಾಗೂ ಜಾನುವಾರುಗಳು ಸಾವಿಗೀಡಾಗಿವೆ. ಅಪಾರ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ. ಆದರೆ, ಮುಖ್ಯಮಂತ್ರಿಯಾಗಲಿ, ಅಧಿಕಾರಿಗಳಾಗಲಿ ಘಟನಾ ಸ್ಥಳಕ್ಕೆ ಬಂದು ಸಾಂತ್ವನ ಹಾಗೂ ಪರಿಹಾರ ನೀಡಿಲ್ಲವೆಂದು ಅವರು ಆರೋಪಿಸಿದರು. ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳನ್ನು ಸಮ್ಮಿಶ್ರ ಸರಕಾರ ಸಂಪೂರ್ಣ ನಿರ್ಲಕ್ಷ ಮಾಡುತ್ತಿದೆ. ಈ ಜಿಲ್ಲೆಗಳ ಬಹುತೇಕ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿರುವುದರಿಂದ ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಇಂತಹ ತಾರತಮ್ಯ ನೀತಿಯನ್ನು ಸರಕಾರ ಕೈ ಬಿಟ್ಟು ಕರಾವಳಿ ಪ್ರದೇಶದಲ್ಲಿ ಮಳೆಯಿಂದಾಗಿ ನಷ್ಟ ಅನುಭವಿಸಿದವರೆಗೆ ಆರ್ಥಿಕ ನೆರವು ನೀಡಬೇಕೆಂದು ಅವರು ಒತ್ತಾಯಿಸಿದರು.
ಜಾತಿ ತಾರತಮ್ಯ ಬೇಡ: ಕಳೆದ ವರ್ಷ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ವ್ಯವಸ್ಥೆಯಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಕೇವಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್ ವಿತರಿಸಲು ಕ್ರಮ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳ ನಡುವೆ ಜಾತಿ ತಾರತಮ್ಯ ಹೆಚ್ಚಾಗುವ ಸಂಭವವಿದೆ. ಹೀಗಾಗಿ ಸರಕಾರ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ರೈತರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಎರಡು ರೂ.ಕಡಿತ ಮಾಡಲು ಸರಕಾರ ಚಿಂತಿಸುತ್ತಿದೆ. ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆಂದು ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಾಲಿನ ಪ್ರೋತ್ಸಾಹ ಧನವನ್ನು ಕಡಿತ ಮಾಡುವ ಮೂಲಕ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲ ಸೃಷ್ಟಿಸಲು ಮುಂದಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಹಾಲಿನ ಪ್ರೋತ್ಸಾಹ ಧನದಲ್ಲಿ ಕಡಿತ ಮಾಡಬಾರದು ಎಂದು ಅವರು ಹೇಳಿದರು.
ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾದ ಭಾರತಿ ಶೆಟ್ಟಿ, ಬಿಜೆಪಿ ಮುಖಂಡರಾದ ಎ.ಎಚ್.ಆನಂದ್, ತಿಮ್ಮೇಶ್‌ಗೌಡ ಮತ್ತಿತರರಿದ್ದರು.