ನಾನು ಎರಡನೆ ದರ್ಜೆ ನಾಗರಿಕನಲ್ಲ: ಎಂ.ಬಿ.ಪಾಟೀಲ್

Update: 2018-06-07 13:15 GMT

ಬೆಂಗಳೂರು, ಜೂ.7: ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗ ಸಹಜವಾಗಿಯೇ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಸಚಿವ ಸ್ಥಾನ ಸಿಕ್ಕಿಲ್ಲ ಅಷ್ಟೇ. ಸಂಪುಟ ವಿಸ್ತರಣೆ ವೇಳೆ ನನಗೆ ಅವಕಾಶ ನೀಡಿದರೆ ಅದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವೇಳೆ ಸಿಗುವ ಅವಕಾಶ ಪಡೆಯಲು ನಾನು ಎರಡನೆ ದರ್ಜೆ ನಾಗರಿಕನಲ್ಲ. ನನ್ನ ಸ್ವಾಭಿಮಾನ, ಆತ್ಮಗೌರವಕ್ಕಿಂತ ಹೆಚ್ಚಿನದ್ದು ಬೇರೆ ಏನು ಇಲ್ಲ ಎಂದರು

ಬಿಜಾಪುರ ಜಿಲ್ಲೆಯಲ್ಲಿ 1991ರಿಂದಲೂ ಪಕ್ಷ ಕಟ್ಟಿದ್ದೇನೆ. ನೀರಾವರಿ ಸಚಿವನಾಗಿ ರಾಜ್ಯಾದ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಕೇಳಿದ್ದೆವು. ಆದರೆ, ಯಾವುದೂ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡಗೆ ಸಚಿವ ಸ್ಥಾನ ತಪ್ಪಿದೆಯಾ? ನಿನ್ನೆಯಿಂದಲೂ ಹಲವು ಮುಖಂಡರು ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇವತ್ತು ಎಐಸಿಸಿ ಕಾರ್ಯದರ್ಶಿಯಾಗಿರುವ ಸತೀಶ್ ಜಾರಕಿಹೊಳಿ ನನ್ನನ್ನು ಭೇಟಿ ಮಾಡಿದ್ದಾರೆ. ಅವರು ನಮಗೆ ಹೈಕಮಾಂಡ್ ಇದ್ದ ಹಾಗೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಮುಖಂಡರು ಪರಸ್ಪರ ವೈಯಕ್ತಿಕ, ರಾಜಕೀಯ, ಪಕ್ಷದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಯಾವ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದೇವೆ ಎಂಬುದನ್ನು ಬಹಿರಂಗವಾಗಿ ಮಾಧ್ಯಮಗಳಲ್ಲಿ ಹೇಳುವ ಅಗತ್ಯವಿಲ್ಲ. ನಾವು ಏನೆ ಮಾಡಿದರೂ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಲು ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನನ್ನ ಸ್ನೇಹಿತರು. ಅವರು ಬಂದು ನನ್ನನ್ನು ಭೇಟಿ ಮಾಡಬಹುದು. ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನಗಳು ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ನಿಮ್ಮ ಮುಂದಿನ ನಡೆ ಏನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ನನ್ನ ಮುಂದಿನ ನಡೆ ನಾಳೆ ಬಿಜಾಪುರಕ್ಕೆ ಹೋಗುವುದು. ನನ್ನ ಮತಕ್ಷೇತ್ರದ ಜನರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವುದು ಎಂದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಸಂಪುಟ ರಚನೆ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಕೆಲವರಿಗೆ ಮಂತ್ರಿ ಸ್ಥಾನ ತಪ್ಪಿದ್ದರಿಂದ ಅಸಮಾಧಾನವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಬೇಕಿದೆ. ಅರ್ಹ ಮುಖಂಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕಿದೆ ಎಂದರು. ಈ ವಿಚಾರವನ್ನು ನಮ್ಮ ಪಕ್ಷದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮುಖಂಡರ ಗಮನಕ್ಕೆ ತರಲಾಗುವುದು. ನಿನ್ನೆ ಹಾಗೂ ಇವತ್ತು ಚರ್ಚೆ ಮಾಡಿದ್ದೇವೆ. ಬೆಳಗಾವಿ ಜಿಲ್ಲೆಗೆ ಒಂದು ಸ್ಥಾನ ಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚಿಸುವುದಿಲ್ಲ. ನಮಗೆ ಸಮಾಧಾನವಿದೆ. ಉಳಿದ ವಿಚಾರಗಳ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಎಂ.ಬಿ.ಪಾಟೀಲ್ ಕಣ್ಣೀರು ?

ಸಚಿವ ಸ್ಥಾನ ಕೈ ತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಸರಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಅವಕಾಶ ಯಾವ ಕಾರಣಕ್ಕೆ ಕೈ ತಪ್ಪಿತೆಂದು ತಿಳಿಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಎಂ.ಬಿ.ಪಾಟೀಲರನ್ನು ಸಮಾಧಾನ ಪಡಿಸಿದ ಸಿದ್ದರಾಮಯ್ಯ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನವನ್ನು ಕೈಗೊಳ್ಳದಂತೆ ಮನವೊಲಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News