×
Ad

ಸಕಲ ಸರಕಾರಿ ಗೌರವದೊಂದಿಗೆ ವೀರಯೋಧ ಅರ್ಜುನ ಅಣ್ಣಿಗೇರಿ ಅಂತ್ಯಕ್ರಿಯೆ

Update: 2018-06-07 18:48 IST

ಧಾರವಾಡ, ಜೂ.7: ಅಸ್ಸಾಂನ ವೋಲಾಂಗನಲ್ಲಿ ಭಾರತಿಯ ಸೇನೆಯ ಇ.ಎಂ.ಇ ಬೆಟಾಲಿಯನ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅನಾರೋಗ್ಯಕ್ಕೀಡಾಗಿದ್ದ, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ವೀರಯೋಧ ಅರ್ಜುನ ಯಲ್ಲಪ್ಪ ಅಣ್ಣಿಗೇರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

ಕಳೆದ ಹನ್ನೆರಡು ವರ್ಷದಿಂದ ಸೇನೆಯಲ್ಲಿದ್ದ ಯೋಧ ಅರ್ಜುನ ಅಣ್ಣಿಗೇರಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಬುಧವಾರ ಹುಟ್ಟೂರು ಮೊರಬದ ಉಪ ಪೊಲೀಸ್ ಠಾಣೆ ಆವರಣದಲ್ಲಿ ಜರುಗಿತು.

ಕರ್ತವ್ಯದಲ್ಲಿದ್ದಾಗ ಪಾರ್ಶ್ವವಾಯು ಪೀಡಿತರಾಗಿ ದಿಬ್ರೂಗಢದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅರ್ಜುನ್ ಅಣ್ಣಿಗೇರಿ 15 ದಿನಗಳ ಹಿಂದೆ ಊರಿಗೆ ಬಂದು ಹೋಗಿದ್ದರು. ಕುಟುಂಬದ ನಾಲ್ಕನೇ ಪುತ್ರರಾಗಿದ್ದರು. ಯೋಧನಿಗೆ ತಂದೆ, ತಾಯಿ, ನಾಲ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರು ಇದ್ದಾರೆ.

ಮೊರಬ ಗ್ರಾಮದ ಪ್ಯಾಟಿ ಓಣಿಯ ಮಹತ್ಮಾ ಗಾಂಧಿ ಪುತ್ಥಳಿ ಬಳಿ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಬೆಳಗ್ಗೆಯಿಂದ ಇಡಲಾಗಿತ್ತು. ಗ್ರಾಮದಲ್ಲಿ ಯೋಧನ ಸಂಬಂಧಿಕರ, ಸೇಹ್ನಿತರ ಮತ್ತು ಸಾರ್ವಜನಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಉಪಭಾಗಾಧಿಕಾರಿ ಪಿ.ಜಯಮಾಧವ, ಡಿವೈಎಸ್ಪಿ ಡಾ.ಚಂದ್ರಶೇಖರ, ನವಲಗುಂದ ತಹಶೀಲ್ದಾರ್ ಕೆ.ಬಿ.ಕೋರಿಶೆಟ್ಟರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಧಾರವಾಡ ಉಪನಿರ್ದೇಶಕ ವಿಂಗ್ ಕಮಾಂಡರ್ ಈಶ್ವರ ಕೋಡೊಳ್ಳಿ ಹಾಗೂ ಮತ್ತಿತರರು ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ, ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ಪೂರೈಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News