ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕಾರ್ನಾಡ್, ಚಂಪಾ, ಬರಗೂರು ಹತ್ಯೆಗೂ ಸಂಚು ?
ಬೆಂಗಳೂರು, ಜೂ.7: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಪ್ರಮುಖ ಆರೋಪಿಯ ವಿಚಾರಣೆ ವೇಳೆ ರಾಜ್ಯದ ಹಿರಿಯ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಚಂದ್ರಶೇಖರ ಪಾಟೀಲ(ಚಂಪಾ), ನಾಡೋಜ ಬರಗೂರು ರಾಮಚಂದ್ರಪ್ಪ ಸೇರಿ ಪ್ರಗತಿಪರರ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇತ್ತೀಚಿಗೆ ಎಸ್‌ಐಟಿ ವಶಕ್ಕೆ ಪಡೆದಿರುವ ಶಂಕಿತ ಆರೋಪಿಗಳ ಪೈಕಿ ಪ್ರಮುಖನಾದ ಪುಣೆಯ ಕಲ್ಯಾಣನಗರ ನಿವಾಸಿ ಅಮೂಲ್ ಕಾಳೆ ಮನೆಯಲ್ಲಿ ದೊರೆತ ಡೈರಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಇದರಲ್ಲಿ ಹಿರಿಯ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಚಂದ್ರಶೇಖರ ಪಾಟೀಲ್, ಬರಗೂರು ರಾಮಚಂದ್ರಪ್ಪ, ವಿಚಾರವಾದಿ ಕೆ.ಎಸ್.ಭಗವಾನ್ ಹಾಗೂ ಮಾಜಿ ಸಚಿವೆ ಲಲಿತಾ ನಾಯಕ್ ಸೇರಿ ಆರು ಜನರ ಹೆಸರು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಲಾಗಿದೆ.
ಸಾಮ್ಯತೆ: ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲೂ ಈ ಹಂತಕರ ಕೈವಾಡ ಇರುವ ಸಾಧ್ಯತೆಯನ್ನು ಎಸ್‌ಐಟಿ ತಂಡ ಶಂಕೆ ವ್ಯಕ್ತಪಡಿಸಿದೆ. ಮೇಲ್ನೋಟಕ್ಕೆ ಗೌರಿ ಲಂಕೇಶ್, ಎಂ.ಎ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ , ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಗಳಲ್ಲಿ ಒಂದಕ್ಕೊಂದು ಸಾಮ್ಯತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಆರೋಪಿಗಳ ವಿಚಾರಣೆ ತೀವ್ರಗೊಳಿಸಲಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಅವರು ಹಿಂದುತ್ವ ಹಾಗೂ ಮೂಲಭೂತವಾದಿಗಳ ವಿರುದ್ಧವಾಗಿ ಬರೆಯುತ್ತಿದ್ದರು, ಭಾಷಣ ಮಾಡುತ್ತಿದ್ದರಿಂದಲೇ ಅವರನ್ನು ಹತ್ಯೆ ಮಾಡಬೇಕಾಯಿತು ಎಂದು ಎಸ್‌ಐಟಿ ವಶದಲ್ಲಿರುವ ಅಮೂಲ್ ಕಾಳೆ, ಪ್ರವೀಣ್ ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.