×
Ad

ಸರಕಾರಿ ನೌಕರರು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು: ತುಮಕೂರು ಜಿಲ್ಲಾಧಿಕಾರಿ ಡಾ.ವಿಶಾಲ್

Update: 2018-06-07 22:48 IST

ತುಮಕೂರು,ಜೂ.7: ಸರಕಾರಿ ನೌಕರರು ಪಾರದರ್ಶಕವಾಗಿ ಹಾಗೂ ಶೀಘ್ರ ತೀರ್ಮಾನ ಕೈಗೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್.ಆರ್ ತಿಳಿಸಿದ್ದಾರೆ. 

ನಗರದ ಬಾಲಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ಸರ್ಕಾರಿ ಯೋಜನೆಗಳ ಅನುಷ್ಟಾನ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯವಸ್ಥೆಯ ಬಗ್ಗೆ ದೂಷಿಸದೆ ಪ್ರತಿಯೊಬ್ಬ ಸರಕಾರಿ ನೌಕರರು, ಶೇ.98-99ರಷ್ಟು ಯಾವುದೇ ಒತ್ತಡವಿಲ್ಲದೆ ಕಾರ್ಯನಿರ್ವಹಿಸಬಹುದಾಗಿದೆ. ಇನ್ನೂ ಶೇ.1-2ರಷ್ಟು ಮಾತ್ರ ಒತ್ತಡವಿರುತ್ತದೆ. ಈ ಒತ್ತಡವನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. 

ಎಲ್ಲಾ ಅಧಿಕಾರಿಗಳು ಹಗಲು-ರಾತ್ರಿಯೆನ್ನದೆ ಕಾರ್ಯ ನಿರ್ವಹಿಸಿದರೆ, ಈಗಿನ ಪ್ರಮಾಣಕ್ಕಿಂತ 10ರಷ್ಟು ಹೆಚ್ಚು ಕೆಲಸ ನಿರ್ವಹಿಸಬಹುದಾಗಿರುತ್ತದೆ. ನಾನು 6 ವರ್ಷಗಳ ಕಾಲ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದೇನೆ. ಯಾವುದೇ ಕೆಲಸವನ್ನು ನಿಯಮಾನುಸಾರ ಪರಾಮರ್ಶಿಸಿ ಸಾಧ್ಯತಾಧ್ಯತೆಗಳ ಬಗ್ಗೆ ತಿಳಿಸಬೇಕು. ಅಲ್ಲದೆ ನಿರ್ಣಯ ತೆಗೆದುಕೊಳ್ಳಬೇಕು. ತಾವು ಕೆಲಸವನ್ನು ಶ್ರದ್ಧೆಯಿಂದ ಮನಸ್ಸಿಟ್ಟು ನಿರ್ವಹಿಸಬೇಕು ಎಂದು ತಿಳಿಸಿದರು. 

ಪಿಎಂ, ಸಿಎಂ ಹಾಗೂ ಡಿಎಂ (ಜಿಲ್ಲಾಧಿಕಾರಿಗಳು) ಈ ಹುದ್ದೆಯಲ್ಲಿರುವವರು ಎಲ್ಲರರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು. ಆಗ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅತ್ಯಲ್ಪ ಅವಧಿಯಲ್ಲಿ ನೇಮಕಾತಿ ಮಾಡಿ ಆದೇಶ ನೀಡಲಾಗಿದೆ. ಆ ನೌಕರರಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 

ಜಿಲ್ಲಾಧಿಕಾರಿಯಾಗಿ ತುಮಕೂರು ಜಿಲ್ಲೆಯಲ್ಲಿ ಕರ್ತವ್ಯ ವಹಿಸಿಕೊಂಡ ನಂತರ ಚುನಾವಣಾ ಕರ್ತವ್ಯದ ಜೊತೆಯಲ್ಲಿ ಜಿಲ್ಲೆಯಲ್ಲಿ 174ಮಂದಿ ನೇರ ನೇಮಕಾತಿಯಡಿ ಹಾಗೂ 549 ಮಂದಿ ನೇರ ಪಾವತಿ, ಒಟ್ಟು 723 ಮಂದಿ ಪೌರ ನೌಕರರಿಗೆ ಆದೇಶ ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ 89 ನೌಕರರಿಗೆ, ದ್ವಿದರ್ಜೆ ಸಹಾಯಕರಿಂದ ರಾಜಸ್ವ ನಿರೀಕ್ಷಕರು ಮತ್ತು ಪ್ರಥಮದರ್ಜೆ ಸಹಾಯಕ ಹುದ್ದೆಗೆ, 14ಮಂದಿ ಡಿ ಗ್ರೂಪ್ ನೌಕರರಿಗೆ ಪ್ರವೇಶ ಪರೀಕ್ಷೆ ನಡೆಸಿ ಎಸ್‍ಡಿಎಗೆ ಪದನ್ನೋತಿ ನೀಡಲಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ 128 ಗ್ರಾಮ ಲೆಕ್ಕಿಗರ ಹುದ್ದೆ ತುಂಬಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಡಾ.ವಿಶಾಲ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮಾತನಾಡಿ, ಸರಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ. ಈ ಯೋಜನೆಗಳು ಫಲ ಎಲ್ಲರಿಗೂ ಸಿಗಬೇಕು. ಕೆಲವೊಮ್ಮೆ ಸರಕಾರದ ಯೋಜನೆಗಳ ಸೌಲಭ್ಯ ಸಿಕ್ಕವರಿಗೆ ಸಿಗುತ್ತಿರುತ್ತದೆ. ಅದು ಆಗಬಾರದು. ಒಮ್ಮೆ ಒಂದು ಯೋಜನೆಯ ಸೌಲಭ್ಯ ಪಡೆದ ನಂತರ ಮತ್ತೆ ಅದೇ ಸೌಲಭ್ಯ ಪಡೆಯಲು ಅವಕಾಶವಿರಬಾರದು. ಈ ಬಗ್ಗೆ ಸರಕಾರಿ ನೌಕರರು ಗಮನ ಹರಿಸಬೇಕು ಎಂದು ಅವರು ತಿಳಿಸಿದರು. 

ಕಾರ್ಯಾಗಾರದಲ್ಲಿ ವಿವಿಧ ಯೋಜನೆಯಡಿ ಸೌಲಭ್ಯ ಪಡೆದವರಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಪದೋನ್ನತಿ ಹೊಂದಿದ ಹಾಗೂ ನೇಮಕಾತಿ ಆದ ನೌಕರರ ವತಿಯಿಂದ ಜಿಲ್ಲಾಧಿಕಾರಿ ಡಾ: ಆರ್. ವಿಶಾಲ್ ಹಾಗೂ ಅಪರ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರನ್ನು ಅಭಿನಂದಿಸಲಾಯಿತು. 

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಉಪವಿಭಾಗಾಧಿಕಾರಿ ಶಿವಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ, ಡಿಹೆಚ್‍ಓ ಡಾ.ರಂಗಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ರಾಮೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಂಗೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News