ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನಿಶ್ಚಿತ: ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ವಿಶ್ವಾಸ
ಶಿವಮೊಗ್ಗ, ಜೂ. 7: ತನಗೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ಸಿಗುವುದು ನಿಶ್ಚಿತ. ಈ ಕುರಿತಂತೆ ಪಕ್ಷದ ವರಿಷ್ಠರಿಂದ ಸ್ಪಷ್ಟ ಭರವಸೆ ಸಿಕ್ಕಿದೆ' ಎಂದು ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಥಮ ಹಂತದ ಸಂಪುಟ ವಿಸ್ತರಣೆಯ ವೇಳೆಯೇ ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿ ಹೋಗಿತ್ತು. ಇದಕ್ಕೆ ಕಾರಣವೇನೆಂಬುವುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರು ತನ್ನನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ತನಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಕೆಲ ನಾಯಕರು ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ನಡೆಸಿ, ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ಅವಕಾಶ ಕಲ್ಪಿಸಿಕೊಡುವ ಭರವಸೆಯಿತ್ತಿದ್ದಾರೆ ಎಂದರು.
ತಮಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕ್ಷೇತ್ರದ ಬೆಂಬಲಿಗರು ಹಾಗೂ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ಧಾರೆ. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಜಿಲ್ಲೆಯಲ್ಲಿ ತಾನೊಬ್ಬನೇ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ತನಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಕಾರ್ಯಕರ್ತರು ಮುಂದಿಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ್ದಾರೆ.
ತಾನ ಸಚಿವರಾಗಿ ನೇಮಕಗೊಂಡರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇನೆ. ನೆನೆಗುದಿಗೆ ಬಿದ್ದಿರುವ ಯೋಜನೆಗಳ ಕಾರ್ಯಗತಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನಿಗಮ ಅಧ್ಯಕ್ಷ ಸ್ಥಾನದ ಆಫರ್ ತಿರಸ್ಕಾರ?!
ಜಿಲ್ಲೆಯ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಏಕೈಕ ಶಾಸಕ ಬಿ.ಕೆ.ಸಂಗಮೇಶ್ವರ್ ಗೆ ಸಚಿವ ಸ್ಥಾನ ಲಭ್ಯವಾಗುವ ನಿರೀಕ್ಷೆ ಜಿಲ್ಲೆಯ ರಾಜಕೀಯ ವಲಯದಲ್ಲಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿದ ಪೈಪೋಟಿಯ ಕಾರಣದಿಂದ ಕೊನೆಕ್ಷಣದಲ್ಲಿ ಅವರು ಸಚಿವ ಸ್ಥಾನ ಕೈ ತಪ್ಪಿತ್ತು. ಇದರಿಂದ ಬೇಸರಗೊಂಡಿದ್ದ ಬಿ.ಕೆ.ಸಂಗಮೇಶ್ವರ್ ಗೆ ಪಕ್ಷದ ವರಿಷ್ಠರು ಸಚಿವ ಸ್ಥಾನಮಾನದ, ಪ್ರಮುಖ ನಿಗಮ ಮಂಡಳಿಯೊಂದರ ಅಧ್ಯಕ್ಷ ಸ್ಥಾನಕ್ಕೇರಿಸುವ ಭರವಸೆ ನೀಡಿದ್ದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಫರನ್ನು ಬಿ.ಕೆ.ಸಂಗಮೇಶ್ವರ್ ಸ್ಪಷ್ಟವಾಗಿ ತಿರಸ್ಕರಿಸಿದ್ದು, ಸಚಿವ ಸ್ಥಾನಕ್ಕೆ ಬಿಗಿ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.