ಹೊನ್ನಾವರ: ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯು
Update: 2018-06-07 22:57 IST
ಹೊನ್ನಾವರ,ಜೂ.07: ತಾಲೂಕಿನ ಮಂಕಿಯ ರಾಮನಗರ ಕ್ರಾಸ್ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಲಾರಿ ಚಾಲಕ ಕೊಲ್ಲಾಪುರದ ನಿವಾಸಿ ರಾಜೇಂದ್ರ ಬಾಪು ಮೋರೆ (38) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಕೇರಳದಿಂದ ಪ್ಲೈವುಡ್ ತುಂಬಿಕೊಂಡು ಹೋಗುತ್ತಿರುವ ವೇಳೆ ಮುಂಬೈಯಿಂದ ಮಂಗಳೂರು ಕಡೆ ಹೊರಟ ಲಾರಿ ನಡುವೆ ಅಪಘಾತ ಸಂಭವಿಸಿದೆ. ಇನ್ನೊಂದು ಲಾರಿ ಚಾಲಕ ನಿತಿನ್ ಎಂಬಾತನಿಗೂ ಗಂಭೀರ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.