×
Ad

ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ಬಂಧನ: ಪೊಲೀಸರ ಕ್ರಮದ ವಿರುದ್ಧ ಪದ್ಮನಾಭ ಪತ್ನಿ ಆಕ್ರೋಶ

Update: 2018-06-07 23:27 IST

ಚಿಕ್ಕಮಗಳೂರು, ಜೂ.7:  ನಕ್ಸಲ್ ಶರಣಾಗತಿ ಯೋಜನೆಯಡಿ 2016ರಲ್ಲಿ ಜಿಲ್ಲಾಡಳಿತದ ಮುಂದೆ ಶರಣಾಗತರಾಗಿದ್ದ ಮಾಜಿ ನಕ್ಸ್‍ಲ್ ನಿಲಗುಳಿ ಪದ್ಮನಾಭ ಅವರನ್ನು ಗುರುವಾರ ಕುಂದಾಪುರ ಪೊಲೀಸರು ಬಂದಿಸಿದ ಘಟನೆ ಸಂಬಂಧ ಪದ್ಮನಾಭ ಅವರ ಪತ್ನಿ ರೇಣುಕಾ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಉಡುಪಿ ನ್ಯಾಯಾಲಯದ ವಿಚಾರಣೆ ಮುಗಿಸಿಕೊಂಡು ಹೊರ ಬರುವ ವೇಳೆ ಕುಂದಾಪುರ ಪೊಲೀಸರು ನಿಲಗುಳಿ ಪದ್ಮನಾಭರವರನ್ನು ಬಂಧಿಸಿದ್ದಾರೆನ್ನಲಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ರೇಣುಕಾ ಗಾಬರಿಗೊಂಡು ಮೂರು ವರ್ಷದ ಮಗುವಿನೊಂದಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೌಡಾಯಿಸಿದ್ದರು. ಈ ವೇಳೆ ಅವರು ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿಲಗುಳಿ ಪದ್ಮನಾಭ ಪದ್ಮನಾಭ ಪತ್ನಿ ರೇಣುಕಾ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪತಿ ಒಂಬತ್ತು ತಿಂಗಳು ಜೈಲಿನಲ್ಲಿದ್ದಾಗ ಯಾರೂ ಬಂದಿರಲಿಲ್ಲ. ಯಾವ ವಾರೆಂಟೂ ಬಂದಿರಲಿಲ್ಲ. ಈಗ ಕಳೆದ ನಾಲ್ಕು ದಿನಗಳಿಂದ ಉಡುಪಿಯಲ್ಲೇ ಇದ್ದರು. ನ್ಯಾಯಾಲಯದ ಗಮನಕ್ಕೂ ತಾರದೆ ಕೋರ್ಟ್‍ನಿಂದ ಹೊರಬರುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನು ಕೇಳಿದರೇ ಇದು ಹೊಸ ಕೇಸು ಎನ್ನುತ್ತಿದ್ದಾರೆ ಎಂದರು.

ಶರಣಾಗತಿಯಾಗಿ, ಜೈಲಿನಿಂದ ಬಂದ ಮೇಲೂ ಪೊಲೀಸರು ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಎಲ್ಲಿಗೆ ಹೋದರು ಹಿಂಬಾಲಿಸುತ್ತಾರೆ. ಈಗ ಕಾರಣವಿಲ್ಲದೆ ಬಂಧಿಸಿದ್ದಾರೆ ಎಂದು ಆರೋಪಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮಾತನಾಡಿ, ಶರಣಾಗತ ಮಾಜಿ ನಕ್ಸಲ್ ಪದ್ಮಗುಳಿ ಪದ್ಮನಾಭ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 18 ಪ್ರಕರಣಗಳಿಗೆ ಜಾಮೀನು ಪಡೆದುಕೊಂಡಿದ್ದರು. 2 ಪ್ರಕರಣಗಳಿಗೆ ಜಾಮೀನು ಪಡೆಯದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರೆಸ್ಟ್ ವಾರೆಂಟ್ ಇದ್ದಿದ್ದರಿಂದ ಬಂಧಿಸಲಾಗಿದೆ. ರಾಜ್ಯ ಸರಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News