ಮಡಿಕೇರಿ: ಕನ್ನಡ ವಿಷಯದಲ್ಲಿ ಶೇ.100 ಸಾಧನೆಗೈದ ವಿದ್ಯಾರ್ಥಿಗಳಿಗೆ ಜೂ.10ರಂದು ಸನ್ಮಾನ
ಮಡಿಕೇರಿ, ಜೂ.8: ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ.100ರಷ್ಟು ಅಂಕ ಪಡೆದ 31 ವಿದ್ಯಾರ್ಥಿಗಳನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಜೂ.10ರಂದು ನಗರದ ಪತ್ರಿಕಾ ಭವನದಲ್ಲಿ ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕಳೆದ ನಾಲ್ಕೈದು ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸಂಪೂರ್ಣ ಅಂಕ ಪಡೆದು ಉತ್ತಮ ಫಲಿತಾಂಶ ನೀಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಗಮನಿಸಿದರೆ ಕೊಡಗು ಜಿಲ್ಲೆಯಲ್ಲಿ ಕನ್ನಡೇತರರೇ ಹೆಚ್ಚಾಗಿದ್ದರೂ, ವಿದ್ಯಾರ್ಥಿಗಳ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಕಳೆದ ಹಲವು ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ವಿವಿಧ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಾ ಬರುತ್ತಿತ್ತು. ಕಳೆದ 5 ವರ್ಷಗಳ ಹಿಂದೆ ಆರಂಭಗೊಂಡ ಈ ಸಂಸ್ಥೆ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯ ನೀಡುವುದಾಗಿ ಘೋಷಿಸಿತ್ತು. ಪ್ರಥಮ ವರ್ಷದಲ್ಲಿ ಗ್ರಾಮೀಣ ಪ್ರದೇಶದ ನಂಜರಾಯಪಟ್ಟಣದ ವಿದ್ಯಾರ್ಥಿಯೊಬ್ಬ 120 ಅಂಕಗಳನ್ನು ಪಡೆದು ಚಿನ್ನದ ನಾಣ್ಯ ತನ್ನದಾಗಿಸಿಕೊಂಡರೆ ನಂತರದ ವರ್ಷದಲ್ಲಿ 121 ಅಂಕ ಪಡೆದ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು, ತದನಂತರದ ವರ್ಷದಲ್ಲಿ 123ಅಂಕ ಪಡೆದ ಮೂವರು ಚಿನ್ನದ ನಾಣ್ಯಗಳನ್ನು ಪಡೆದುಕೊಂಡಿದ್ದರು ಎಂದು ಸ್ಮರಿಸಿದರು.
ಬಳಿಕ ಈ ಬಳಗದಲ್ಲಿದ್ದ ಹೆಚ್ಚಿನ ಪದಾಧಿಕಾರಿಗಳೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರಿಂದ ನಂತರ ಈ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದಲೇ ನಿರ್ವಹಿಸುವಂತೆ ತೀರ್ಮಾನಿಸಿ ಅದನ್ನು ಜಿಲ್ಲೆಯಾದ್ಯಂತ ವಿಸ್ತರಿಸಿದ್ದು, 2015-16ನೇ ಸಾಲಿನಲ್ಲಿ 72 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿದ್ದರು. ಅದೇ ರೀತಿ ದ್ವಿತೀಯ ಪಿಯುಸಿ ಕನ್ನಡ ವಿಷಯದಲ್ಲಿ ಶೇ.100ರಷ್ಟು ಅಂಕ ಪಡೆದ 76 ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 180 ವಿದ್ಯಾರ್ಥಿಗಳನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗೌರವಿಸಲಾಗಿತ್ತು ಎಂದು ವಿವರಿಸಿದರು.
ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯ ಕನ್ನಡ ವಿಷಯದಲ್ಲಿ ಜಿಲ್ಲೆಯ 8 ವಿದ್ಯಾರ್ಥಿಗಳು 125ಕ್ಕೆ 125 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದರೆ, ಈ ಬಾರಿ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ 30 ವಿದ್ಯಾರ್ಥಿಗಳು 125ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ. ಮತ್ತು ಪಿಯುಸಿಯಲ್ಲಿ ಓರ್ವ ವಿದ್ಯಾರ್ಥಿ ಕನ್ನಡದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದು, ಇದು ಕೊಡಗಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಈ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಮಾರಂಭ ಹಾಗೂ ಕನ್ನಡ ಸಾಹಿತ್ಯ ಪರಿಷತ್‍ನ ಸಂಸ್ಥಾಪನಾ ದಿನವನ್ನು ಜೂ.10ರಂದು ಪೂರ್ವಾಹ್ನ 11ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಕೆಂಚಪ್ಪ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅರಕಲಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದು, ಇದೇ ಸಂದರ್ಭ ಜಿಲ್ಲೆಯ ಹಿರಿಯ ಸಾಹಿತಿ ವಿಜಯಾ ವಿಷ್ಣು ಭಟ್ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪಣ ತೊಟ್ಟಿದ್ದು, ಪರಿಷತ್ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿರುವ ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ ಹಾಗೂ ಶುದ್ಧ ಕನ್ನಡ ಬರೆಯುವ ಸ್ಪರ್ಧೆಯ ಉಪ ಅಂತ್ಯ ಮತ್ತು ಅಂತಿಮ ಸ್ಪರ್ಧೆಗಳನ್ನು ಜೂನ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ವಿಜೇತರಿಗೆ ಚಿನ್ನದ ನಾಣ್ಯಗಳನ್ನು ವಿತರಿಸಲಾಗುವುದು ಎಂದರು.
ಕೊಡಗಿನವರಾಗಿದ್ದು, ಹೊರ ಜಿಲ್ಲೆಗಳ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ.100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನೂ ಪರಿಷತ್ ವತಿಯಿಂದ ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು, ಅಂತಹ ವಿದ್ಯಾರ್ಥಿಗಳಿದ್ದಲ್ಲಿ ಜೂ.10ರಂದು ನಡೆಯುವ ಸಮಾರಂಭಕ್ಕೆ ಹಾಜರಾಗುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್‍ನ ಮಾಧ್ಯಮ ಕಾರ್ಯದರ್ಶಿ ಅಶ್ವಥ್‍ಕುಮಾರ್, ಮಡಿಕೇರಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ|| ಕೂಡಕಂಡಿ ದಯಾನಂದ, ಕೊಡಗು ಪ್ರೆಸ್ ಕ್ಲಬ್ ಖಜಾಂಚಿ ರೆಜಿತ್‍ಕುಮಾರ್ ಉಪಸ್ಥಿತರಿದ್ದರು.