ಹೈಕಮಾಂಡ್ ಎದುರು ಶಕ್ತಿ ಪ್ರದರ್ಶನಕ್ಕೆ ಮುಂದಾದ ಅತೃಪ್ತರು ?

Update: 2018-06-08 12:49 GMT
ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ಬಿ.ಸಿ ಪಾಟೀಲ್

ಬೆಂಗಳೂರು, ಜೂ.8: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಸುಮಾರು 20ಕ್ಕೂ ಹೆಚ್ಚು ಅತೃಪ್ತ ಶಾಸಕರ ತಂಡವು ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎದುರು ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಎಂ.ಬಿ.ಪಾಟೀಲ್ ಜೊತೆಗೆ ಶಾಸಕರಾದ ಸತೀಶ್ ಜಾರಕಿಹೊಳಿ, ಎನ್.ಎ. ಹಾರೀಸ್, ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಸಿ.ಎಸ್.ಶಿವಳ್ಳಿ, ಟಿ.ರಘುಮೂರ್ತಿ, ಆರ್. ರೋಷನ್‌ ಬೇಗ್, ಬಿ.ಕೆ.ಸಂಗಮೇಶ್, ವಿ.ಮುನಿಯಪ್ಪ, ತುಕಾರಾಂ, ಪಿ.ಟಿ. ಪರಮೇಶ್ವರ್ ನಾಯ್ಕ್, ಶಿವರಾಮ್ ಹೆಬ್ಬಾರ್, ಬಿ.ನಾರಾಯಣ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಸೇರಿದಂತೆ ಇನ್ನಿತರರು ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಶನಿವಾರ ಅಥವಾ ರವಿವಾರ ಈ ಶಾಸಕರ ತಂಡವು ಹೊಸದಿಲ್ಲಿಗೆ ತೆರಳಿ, ಕಾಂಗ್ರೆಸ್ ಹೈಕಮಾಂಡ್ ಎದುರು ಶಕ್ತಿ ಪ್ರದರ್ಶನ ಮಾಡಲು ಉದ್ದೇಶಿಸಿದೆ. ಸಂಪುಟ ವಿಸ್ತರಣೆಯಾದ ಬಳಿಕ ಕಳೆದ ಎರಡು ದಿನಗಳಿಂದ ಶಾಸಕರ ಭಿನ್ನಮತ ಉತ್ತುಂಗದಲ್ಲಿದ್ದರೂ ರಾಷ್ಟ್ರೀಯ ನಾಯಕರ ಪೈಕಿ ಯಾರೊಬ್ಬರೂ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಯತ್ನಿಸದಿರುವುದು ಶಾಸಕರನ್ನು ಕೆರಳಿಸಿದೆ ಎನ್ನಲಾಗಿದೆ.

ಸಚಿವ ಸ್ಥಾನಕ್ಕಾಗಿ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಶಾಮನೂರು ಶಿವಶಂಕರಪ್ಪ ನಿವಾಸಗಳಲ್ಲಿ ಶಾಸಕರು ಪ್ರತ್ಯೇಕವಾಗಿ ಸರಣಿ ಸಭೆಗಳನ್ನು ನಡೆಸಿ, ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ, ಸಂಸದ ಡಿ.ಕೆ.ಸುರೇಶ್, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭೇಟಿಗೆ ಸಮಯ ಕೋರಿರುವುದು ಕುತೂಹಲ ಕೆರಳಿಸಿದೆ.

ಸಂಸದರ ನಿಯೋಗದೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಭಿನ್ನಮತೀಯ ಬೆಳವಣಿಗೆಗಳ ಕುರಿತು ವರದಿಯನ್ನು ಒಪ್ಪಿಸಲು ಡಿ.ಕೆ.ಸುರೇಶ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಇದೇ ಸಂದರ್ಭದಲ್ಲಿ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕಾತಿ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ಮಾಡೋಣ. ನಾವು 20ಕ್ಕೂ ಹೆಚ್ಚು ಶಾಸಕರು ಜೊತೆಯಲ್ಲಿರಬೇಕು. ಮಂತ್ರಿಗಿರಿ ಆಸೆಗಾಗಿ ಒಂದಿಬ್ಬರೂ ಹೋದರೂ ಪರವಾಗಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದು, ಒಂದೆರೆಡು ದಿನಗಳಲ್ಲಿ ಸಭೆ ಮಾಡಿ ಮುಂದಿನ ಹೋರಾಟ ಮಾಡೋಣ.

-ಮಾಜಿ ಸಚಿವ ಎಂ.ಬಿ.ಪಾಟೀಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News