ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ; ಒಟ್ಟಾರೆ ಶೇ.80.88 ರಷ್ಟು ಮತದಾನ
ಮೈಸೂರು,ಜೂ.8: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಒಟ್ಟಾರೆ ಶೇ.80.88 ರಷ್ಟು ಮತದಾನ ನಡೆದಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ. ನಾಲ್ಕು ಜಿಲ್ಲೆಗಳಿಂದ ಒಟ್ಟು 20,678 ಮಂದಿ ಮತದಾರರು ಇದ್ದಾರೆ. ಮೈಸೂರು ಜಿಲ್ಲೆಯಲ್ಲಿ 5,603 ಪುರುಷ ಮತದಾರರು, 4036 ಮಹಿಳೆಯರು, 4 ತೃತೀಯ ಲಿಂಗಿಗಳು ಸೇರಿ ಒಟ್ಟು 9643 ಮತದಾರರು ಇದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.86.41 ಮತದಾನ ನಡೆದರೆ ಮೈಸೂರು ಜಿಲ್ಲೆಯಲ್ಲಿ 77.12 ಅತಿ ಕಡಿಮೆ ಮತದಾನವಾಗಿದೆ. ಇನ್ನು ಮಂಡ್ಯ ಶೇ.8392, ಹಾಸನ 83.88 ಮತದಾನವಾಗಿದೆ.
ಜೆಡಿಎಸ್‍ನ ಮರಿತಿಬ್ಬೇಗೌಡ, ಕಾಂಗ್ರೆಸ್‍ನ ಎಂ.ಲಕ್ಷ್ಮಣ್, ಬಿಜೆಪಿಯ ನಿರಂಜನ್ ಮೂರ್ತಿ ಸೇರಿದಂತೆ 9 ಮಂದಿ ಕಣದಲ್ಲಿದ್ದಾರೆ. ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಚುನಾವಣೆ ನಡೆದಿದ್ದು, ಆಯಾ ಪಕ್ಷದ ಕಾರ್ಯಕರ್ತರು ಮತದಾನಕ್ಕೆ ಬರುವ ಶಿಕ್ಷಕರನ್ನು ಅಡ್ಡಗಟ್ಟಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತಹಾಕುವಂತೆ ಮನವಿ ಮಾಡುತ್ತಿದ್ದರು.
ಆಯಾ ಜಿಲ್ಲಾ ಕೇಂದ್ರದಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆದು ಮತದಾನದ ಬ್ಯಾಲೆಟ್ ಮೈಸೂರಿನ ಮಹರಾಣಿ ಮಹಿಳಾ ಪದವಿ ಕಾಲೇಜಿನ ಸ್ಟ್ರಾಂಗ್ ರೂಂ ಸೇರಲಿದೆ. ಜೂ.12 ರಂದು ಮತ ಎಣಿಕೆ ನಡೆಯಲಿದೆ.