×
Ad

ಹಿಂದುತ್ವ ರಾಜಕಾರಣದಿಂದ ದೇಶಕ್ಕೆ ಬಹುದೊಡ್ಡ ಗಂಡಾಂತರ: ಪ್ರೊ.ಮಹೇಶ್ ಚಂದ್ರಗುರು

Update: 2018-06-08 20:39 IST

ಮೈಸೂರು, ಜೂ.8: ಜಾತ್ಯತೀತ ಶಕ್ತಿಗಳ ಬಲವರ್ಧನೆಗಾಗಿ ಜೂ.10ರ ಬೆಳಗ್ಗೆ 11ಕ್ಕೆ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರ ಗುರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿಯಾನದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ, ಪ್ರೊ.ಕೆ.ಎಸ್.ಭಗವಾನ್, ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಇ.ಸಿ.ರಾಮಚಂದ್ರಗೌಡ, ಪ್ರೊ.ಶಬ್ಬೀರ್ ಮಸ್ತಾಫ್, ಹಿರಿಯ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ದಲಿತ ವೆಲ್ ಫೇರ್ ಟ್ರಸ್ಟ್ ನ ಶಾಂತರಾಜು, ಪ್ರೊ.ಟಿ.ಎಂ.ಮಹೇಶ್, ಸಾಹಿತಿ ಬನ್ನೂರು ಕೆ.ರಾಜು, ಪ್ರೊ.ಷಣ್ಮುಗಮ್, ಡಾ.ಸೌಭಾಗ್ಯವತಿ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು ಭಾಗಿಯಾಗುವರು ಎಂದು ತಿಳಿಸಿದರು.

ಹಿಂದುತ್ವ ರಾಜಕಾರಣದಿಂದ ದೇಶಕ್ಕೆ ಬಹುದೊಡ್ಡ ಗಂಡಾಂತರವಿದ್ದು, ಇದರ ವಿರುದ್ಧ ಹೋರಾಡಲು ಜಾತ್ಯತೀತ ಶಕ್ತಿ ಒಗ್ಗೂಡಬೇಕಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಬಲಪ್ರದರ್ಶನಗೊಳಿಸಲು ಈ ಅಭಿಯಾನ ಆಯೋಜಿಸಲಾಗಿದೆ. ಅಲ್ಲದೆ ಇದೊಂದು ರಾಜಕೀಯೇತರ ಸಂಘಟನೆಯಾಗಿದ್ದು, ಎಂದಿಗೂ ರಾಜಕಾರಣ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕಾರಣಿಗಳು ಅಯೋಗ್ಯರು: ಅಯೋಗ್ಯರು, ಮೂರ್ಖರು, ತಂತ್ರಗಾರಿಕೆ ನಡೆಸುವರು ರಾಜಕಾರಣಿಗಳಾಗಿದ್ದು ಇದರಿಂದ ರಾಜಕೀಯ ಕಲುಷಿತಗೊಂಡಿದೆ. ಅಂತಹ ರಾಜಕಾರಣಕ್ಕೆ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಹೋಗಿ ಪೆದ್ದುತನ ಮೆರೆದಿದ್ದಾರೆ ಎಂದರು.

ರಾಜ್ಯ ದಲಿತ ವೆಲ್ ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ರಾಜ್ಯ ಹಿಂದುಳಿದ ವರ್ಗಗಳ ಸಮನ್ವಯ ಸಮಿತಿ, ರಾಜ್ಯ ಕೂಲಿಕಾರರ ಸಂಘ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಬಳಗ ಇನ್ನಿತರ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ಯತೀತ ವಾದವನ್ನು ಬಲಗೊಳಿಸಬೇಕೆಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಸಿದ್ದಸ್ವಾಮಿ, ಬನ್ನೂರು ಕೆ.ರಾಜು, ಮಹದೇವ ಮೂರ್ತಿ, ಉಮೇಶ್, ರಾಜಣ್ಣ, ಭವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News